ಉಜಿರೆ: ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಇದೇ 16 ರಿಂದ 28ರ ವರೆಗೆ ಸಾಧಕರಾಗಿ ಶುಶ್ರೂಷೆ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡರು.
ಗುರುವಾರ ಬೆಳಿಗ್ಗೆ ಹನ್ನೊಂದು ಗಂಟೆ ವರೆಗೆ ಎಂದಿನಂತೆ ಶುಶ್ರೂಷೆ ಪಡೆದು ಬಳಿಕ ಶ್ರೀ ಸನ್ನಿಧಿ ಅತಿಥಿ ಗೃಹಕ್ಕೆ ಬಂದರು.
ಅಲ್ಲಿಂದ 12 ಗಂಟೆಗೆ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬಂದು ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.
ಬಳಿಕ ಶ್ರೀ ಸನ್ನಿಧಿಯಲ್ಲಿ ಭೋಜನ ಸ್ವೀಕರಿಸಿ ಮಂಗಳೂರಿಗೆ ಹೋದರು. ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಉಪಸ್ಥಿತರಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು: ದೇವರ ದರ್ಶನ ಮಾಡಿ ಹೊರಗೆ ಬರುವಾಗ ಹಾಗೂ ಶ್ರೀ ಸನ್ನಿಧಿಯಲ್ಲಿ ಊಟಕ್ಕೆ ಮೊದಲು ಹಾಗೂ ಊಟದ ಬಳಿಕ ಹೊರಡುವಾಗ ಮಾಧ್ಯಮದವರು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದರೂ, ಅವರು ನಿರಾಕರಿಸಿದರು. ಕಾರಿನಲ್ಲಿ ಕುಳಿತುಕೊಳ್ಳುವಾಗ ತಮ್ಮ ಆರೋಗ್ಯ ಹೇಗಿದೆ ಎಂದು ಪ್ರಶ್ನಿಸಿದಾಗ ಚೆನ್ನಾಗಿದೆ ಎಂದಷ್ಟೇ ಹೇಳಿ ಮೌನಿಯಾದರು.
ಉತ್ತಮ ಸಾಧಕ: ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಮಾಧ್ಯಮದವರಿಗೆ ಶುಸ್ರೂಷೆಯ ಸವಿವರ ಮಾಹಿತಿ ನೀಡಿದರು.
ಪ್ರಕೃತಿ ಚಿಕಿತ್ಸಾ ವಿಧಾನದಲ್ಲಿ ದೇಹ ಮತ್ತು ಮನಸ್ಸಿಗೆ ಏಕ ಕಾಲದಲ್ಲಿ ಶುಶ್ರೂಷೆ ನೀಡಿ ಪುನಶ್ಚೇತನಗೊಳಿಸಲಾಗುತ್ತದೆ. ಬೆಳಿಗ್ಗೆ ಗಂಟೆ 6 ರಿಂದ 7ರ ವರೆಗೆ ಯೋಗ, ಧ್ಯಾನ, ಪ್ರಾರ್ಥನೆ ಮೂಲಕ ಮಾನಸಿಕ ಆರೋಗ್ಯ ಮತ್ತು ಶಾಂತಿ ಹೆಚ್ಚಾಗುವಂತೆ ಮಾಡಲಾಗುತ್ತದೆ.
ಆಹಾರ ಚಿಕಿತ್ಸೆ ಮೂಲಕ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಿ, ದೈಹಿಕ ಆರೋಗ್ಯ ಸುಧಾರಣೆ ಮಾಡಲಾಗುತ್ತದೆ. ಇದರಿಂದಾಗಿ ದೇಹದ ತೂಕ ಕಡಿಮೆ ಆಗಿ, ಜೀವನ ಶೈಲಿ ಸುಧಾರಣೆಯಾಗಿ ಉತ್ಸಾಹ ಮತ್ತು ಲವಲವಿಕೆ ಮೂಡಿ ಬರುತ್ತದೆ.
ಸಿದ್ದರಾಮಯ್ಯ ಮೂರನೆ ಬಾರಿಗೆ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದು ಎಲ್ಲಾ ರೀತಿ ಚಿಕಿತ್ಸೆಗಳಿಗೂ ಉತ್ತಮ ಸ್ಪಂದನೆ ನೀಡುತ್ತಾರೆ. ಶಿಸ್ತಿನ ಸಿಪಾಯಿಯಾಗಿ ಸಹಕರಿಸುತ್ತಾರೆ ಎಂದು ಡಾ. ಪ್ರಶಾಂತ್ ಶೆಟ್ಟಿ ತಿಳಿಸಿದರು.
Click this button or press Ctrl+G to toggle between Kannada and English