ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಚಟುವಟಿಕೆ ಇದುವರೆಗೂ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸದ ಜತೆಗೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ವಿಧಾನಸೌಧದಲ್ಲಿ ನಡೆಯುತ್ತಿತ್ತು. ಆದರೆ ಇದೀಗ ಹೊಸದೊಂದು ಶಕ್ತಿ ಕೇಂದ್ರ ರಚನೆ ಆಗಿದೆ. ಅದು ಮಾಜಿ ಸಿಎಂ ಸಿದ್ದರಾಮಯ್ಯರ ಹಾಲಿ ನಿವಾಸ ಕಾವೇರಿ.
ಕಾವೇರಿ ಇದೀಗ ಸಿದ್ಧವಾಗಿರುವ ಹೊಸ ಶಕ್ತಿ ಕೇಂದ್ರ. ಇದೀಗ ಹಲವು ಶಾಸಕರು, ಕಾಂಗ್ರೆಸ್ ನಾಯಕರು ಭೇಟಿ ಮಾಡುತ್ತಿದ್ದಾರೆ. ಕಳೆದ ರಾತ್ರಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ವಾಪಾಸಾಗಿರುವ ಸಿದ್ದರಾಮಯ್ಯ ಇಂದು ಬೆಳಗ್ಗಿನಿಂದಲೇ ಹಲವು ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. 11.30ಕ್ಕೆ ಕಾಂಗ್ರೆಸ್ ಕಚೇರಿಗೆ ತೆರಳಲಿದ್ದು, ಅಷ್ಟರೊಳಗೆ ಹಲವು ಬೆಂಗಳೂರು ನಗರ ಶಾಸಕರು, ಆಪ್ತ ನಾಯಕರು, ನಿಗಮ ಮಂಡಳಿಗೆ ಲಾಬಿ ಮಾಡವವರು ಬಂದು ಭೇಟಿ ಮಾಡುತ್ತಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಭೆ ಇದೆ ಹಾಗೂ ಜು. 1ರಂದು ಸರ್ವಪಕ್ಷ ಸಭೆ ಇದೆ. ಇಂದು ಸಂಜೆ 4 ಗಂಟೆಗೆ ಕುಮಾರಕೃಪದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಮಿತಿ ಸಭೆ ಇದೆ.
ಇಂದು ಬೆಳಗ್ಗೆಯೇ ಮಾಜಿ ಸಚಿವ ಎ. ಮಂಜು ಆಗಮಿಸಿ ಭೇಟಿ ಸಾಧ್ಯವಾಗದೇ ಐದು ನಿಮಿಷದಲ್ಲಿ ವಾಪಾಸ್ಸಾಗಿದ್ದಾರೆ. ಇನ್ನು ಕೆಲ ಶಾಸಕರು ಭೇಟಿಗೆ ಅವಕಾಶ ಕೋರಿದ್ದು, ಸಾಧ್ಯವಾದರೆ ಇಂದು 10.30ರ ಸಮಯಕ್ಕೆ ಆಗಮಿಸಬಹುದು. ಇದಕ್ಕಿಂತ ಮುಖ್ಯವಾಗಿ ಇಂದು ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಆಗಮಿಸುತ್ತಿದ್ದು, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈ ಕಾರಣದಿಂದಲೂ ಹಲವು ನಾಯಕರ ಭೇಟಿಗೆ ಇನ್ನೂ ಸಿದ್ದರಾಮಯ್ಯ ಅವಕಾಶ ನೀಡಿಲ್ಲ ಎನ್ನಲಾಗಿದೆ.
ಒಟ್ಟಾರೆ ಇಂದು ಸಿದ್ದರಾಮಯ್ಯರನ್ನು ಭೇಟಿ ಮಾಡುವ ನಾಯಕರ ಸಂಖ್ಯೆ ಕಡಿಮೆ ಆದರೂ, ಮುಂದಿನ ದಿನಗಳಲ್ಲಿ ಕಾವೇರಿ ಕೂಡ ಶಕ್ತಿಕೇಂದ್ರವಾಗಿ ಮಾರ್ಪಡಲಿದೆ ಎನ್ನಲಾಗುತ್ತಿದೆ.
Click this button or press Ctrl+G to toggle between Kannada and English