ಮಹಾನಗರ ಪಾಲಿಕೆಯ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ..!

9:46 AM, Saturday, June 30th, 2018
Share
1 Star2 Stars3 Stars4 Stars5 Stars
(No Ratings Yet)
Loading...

mangaluruಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿವೆ. ಪಾಲಿಕೆ ಚುನಾವಣೆ ಸಮೀಪಿಸುತ್ತಿರುವಂತೆ ನಗರಾಭಿವೃದ್ಧಿ ಇಲಾಖೆಯು ವಾರ್ಡ್ ವಾರ್ ಕರಡು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

ಈ ಮೂಲಕ ಮುಂದಿನ ಮಾರ್ಚ್ನಲ್ಲಿ ನಡೆಯುವ ಪಾಲಿಕೆ ಚುನಾವಣೆಗೆ ರಾಜಕೀಯ ಲೆಕ್ಕಾಚಾರ ಆರಂಭಗೊಂಡಿದೆ. ಇದರ ನಡುವೆ ಕರಡು ಮೀಸಲಾತಿ ಪಟ್ಟಿ ಹಾಲಿ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯು ಒಟ್ಟು 60 ವಾರ್ಡ್ಗಳನ್ನು ಹೊಂದಿದ್ದು, ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿ ಪ್ರಕಟಗೊಳ್ಳುತ್ತಿದೆ. ಅಂತೆಯೇ ಈಗ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಈಗ ಪ್ರಕಟಗೊಂಡಿರುವ ಮೀಸಲಾತಿಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದರೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಒದಗಿಸಲಾಗಿದೆ.

ಪಾಲಿಕೆಯ ಒಟ್ಟು 60 ವಾರ್ಡ್ಗಳ ಪೈಕಿ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳ ಮೀಸಲಾತಿ ಬದಲಾವಣೆಗೊಂಡಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಹುತೇಕ ಮಂದಿ ಈ ಬಾರಿ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಜೊತೆಗೆ ಇಲ್ಲಿಯವರೆಗೆ ಇದ್ದ ಕ್ಷೇತ್ರಗಳ ಪೈಕಿ ಹೆಚ್ಚುವರಿಯಾಗಿ ಮಹಿಳಾ ಮೀಸಲಾತಿ ಈ ಬಾರಿ ಬಂದಿರುವುದರಿಂದ ಕೆಲವರ ಸ್ಥಾನಕ್ಕೆ ಕುತ್ತು ಬಂದಿದೆ.

ಕಾಂಗ್ರೆಸ್ನ ಕಾರ್ಪೊರೇಟರ್ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ದೀಪಕ್ ಪೂಜಾರಿ, ಲ್ಯಾನ್ಸಿಲಾಟ್ ಪಿಂಟೋ, ಅಶೋಕ್ ಡಿ.ಕೆ, ಅಬ್ದುಲ್ ರವೂಫ್, ಪುರುಷೋತ್ತಮ ಚಿತ್ರಾಪುರ ಸಹಿತ ಹಲವು ಮುಖಂಡರು ಈ ಬಾರಿ ಸ್ಥಾನ ಕಳೆದುಕೊಳ್ಳುವ ಹಂತದಲ್ಲಿದ್ದಾರೆ. ಜೊತೆಗೆ ಬಿಜೆಪಿಯ ಕಾರ್ಪೊರೇಟರ್ ಗಳಾದ ಗಣೇಶ್ ಹೊಸಬೆಟ್ಟು, ಪ್ರೇಮಾನಂದ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ತಿಲಕ್ ರಾಜ್ ಸಹಿತ ಇನ್ನೂ ಹಲವರ ಕ್ಷೇತ್ರಗಳು ಬದಲಾಗಿದ್ದು, ಸ್ಥಾನ ವಂಚಿತವಾಗುವ ಸಾಧ್ಯತೆಗಳಿವೆ.

ಇನ್ನು ಮೀಸಲಾತಿಯ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರುಗಳಿಗೆ ಅವಕಾಶ ತಪ್ಪಿಹೋಗುವ ಸಾಧ್ಯತೆಗಳಿರುವುದರಿಂದ ಮೀಸಲಾತಿಯ ಬಗ್ಗೆ ಆಕ್ಷೇಪಣೆಗಳು ಸಲ್ಲಿಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ.

ಕರಡು ಮೀಸಲಾತಿಯ ಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಮಹಾಬಲ ಮಾರ್ಲ ಅವರು ಈಗ ಬಂದಿರುವ ಪಟ್ಟಿಯಲ್ಲಿ ನನಗೆ ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನ್ನ ಕ್ಷೇತ್ರದ ಸುತ್ತಲೂ ಮಹಿಳಾ ಕ್ಷೇತ್ರಗಳೇ ಇದೆ. ಪಕ್ಷ ಒಂದು ವೇಳೆ ಸ್ಪರ್ಧಿಸಲು ಅವಕಾಶ ನೀಡಿದರೆ ಸ್ಪರ್ಧಿಸುವೆ. ಸ್ಪರ್ಧೆಗೆ ಅವಕಾಶ ನೀಡಬೇಕೆಂದು ಒತ್ತಡ ಹಾಕುವುದಿಲ್ಲ ಬದಲಾವಣೆ ಅನಿವಾರ್ಯ. ಆದರೆ ಈ ಪಟ್ಟಿ ಕಾನೂನುನಾತ್ಮಕವಾಗಿ ಬಂದಿಲ್ಲ. ಈ ಪಟ್ಟಿಯ ಹಿಂದೆ ದೊಡ್ಡ ಲಾಬಿ ನಡೆದಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English