ರಾಷ್ಟ್ರೀಯ ಹೆದ್ದಾರಿ : ಮಂದಗತಿಯ ಕಾಮಗಾರಿ, ಅಲ್ಲಲ್ಲಿ ಟೋಲ್‌ಗೇಟ್‌ – ಸಭೆ

11:39 AM, Sunday, November 27th, 2011
Share
1 Star2 Stars3 Stars4 Stars5 Stars
(8 rating, 6 votes)
Loading...

DC Chennappa Gowda

ಮಂಗಳೂರು: ಸುರತ್ಕಲ್‌- ಬಿ.ಸಿ. ರೋಡ್‌ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ವಹಣೆಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ  ಸಮಾಲೋಚನಾ ಸಭೆ ನಡೆಯಿತು.

ಸಭೆಯಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಟೋಲ್‌ಗೇಟ್‌ನಿಂದ ಕನಿಷ್ಠ 60 ಕಿ. ಮೀ. ದೂರದಲ್ಲಿ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸಬಹುದು. ಅಲ್ಲದೆ ಮಹಾನಗರ ಪಾಲಿಕೆಯ ಗಡಿಯಿಂದ 10 ಕಿ. ಮೀ. ಅನಂತರ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸಬಹುದು ಎನ್ನುವ ನಿಯಮವಿದೆ. ಬ್ರಹ್ಮರಕೂಟ್ಲುವಿನಲ್ಲಿ ರಾ. ಹೆದ್ದಾರಿಯಲ್ಲಿ ಟೋಲ್‌ಗೇಟ್‌ ನಿರ್ಮಿಸಲಾಗಿದ್ದು, ಬೈಕಂಪಾಡಿ ಪರಿಸರದಲ್ಲಿ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸುವ ಯೋಜನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ನಾಗರಿಕ ಸಮಿತಿ ಪ್ರತಿನಿಧಿಗಳು ವಾದಿಸಿದರು.

ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನಾಗರಿಕ ಸಮಿತಿ ಪ್ರತಿನಿಧಿಗಳನ್ನು ಒಳಗೊಂಡ ತಂಡ ಡಿ. 31ರೊಳಗೆ ಸ್ಥಳ ವೀಕ್ಷಿಸಿ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ಮರುಪರಿಶೀಲನೆ ನಡೆಸಿ ಪರಿಹಾರ ಕಂಡುಕೊಳ್ಳಲು ಇನ್ನೊಂದು ಸಭೆ ನಡೆಸಲು ಈ ಸಂದರ್ಭದಲ್ಲಿ ನಿರ್ಣಯಿಸಲಾಯಿತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳು, ಬಸ್‌ ನಿಲ್ದಾಣದ ಕೊರತೆ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳು ಮುಂತಾದ ವಿಷಯಗಳ ಕುರಿತು ಸಮಿತಿ ಪ್ರತಿನಿಧಿಗಳು ಗಮನ ಸೆಳೆದರು.

ಜಿಲ್ಲಾಧಿಕಾರಿ ಡಾ| ಚನ್ನಪ್ಪ ಗೌಡ, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಪ್ರಶಾಂತ್‌ ಗಾವಸಾನಿ, ನಾಗರಿಕ ಸಮಿತಿಯ ಪ್ರತಿನಿಧಿಗಳಾದ ಯತೀಶ್‌ ಬೈಕಂಪಾಡಿ, ಎಸ್‌. ಪ್ರಸಾದ್‌, ಹರೀಶ್‌ ಪೇಜಾವರ, ರೇವತಿ ಪುತ್ರನ್‌ (ಪಾಲಿಕೆ ಸದಸ್ಯೆ), ಆನಂದ, ಶೋಭೇಂದ್ರ ಸಸಿಹಿತ್ಲು, ಪುಷ್ಪರಾಜ ಶೆಟ್ಟಿ, ಮಹಾಬಲ ರೈ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English