ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ

9:34 PM, Monday, July 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

Drug dayಉಜಿರೆ : ಸುಸಂಸ್ಕೃತರಾಗಿ, ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ ಸಿಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ವ್ಯಸನದಿಂದ ವ್ಯಕ್ತಿತ್ವ ನಾಶವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಾಯೋಜಕತ್ವದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯವ್ಯಾಪಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸ್ವೇಚ್ಛೆಯಿಂದ, ಸಹವಾಸ ದೋಷದಿಂದ ಹಾಗೂ ಕ್ಷಣಿಕ ಸಂತೋಷಕ್ಕಾಗಿ ವಿದ್ಯಾರ್ಥಿಗಳು ಆಕರ್ಷಣೆಗೊಳಗಾಗಿ ಮದ್ಯ ವ್ಯಸನಕ್ಕೆ ಬಲಿಯಾಗಬಾರದು. ಧರ್ಮ ಎಂಬುದು ಕೇವಲ ಹಣೆಪಟ್ಟಿಗಾಗಿ ಅಲ್ಲ. ಧರ್ಮದ ಹಿನ್ನೆಲೆಯಲ್ಲಿ ನಡೆಸುವ ಆಚರಣೆಗಳು, ನಂಬಿಕೆ-ನಡವಳಿಕೆಗಳು ಮನಸ್ಸಿನ ನಿಯಂತ್ರಣದೊಂದಿಗೆ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿವೆ. ಪ್ರಪಂಚದಲ್ಲಿ ಕತ್ತಲು-ಬೆಳಕಿನಂತೆ ಸತ್ಕಾರ್ಯ ಹಾಗೂ ದುಷ್ಕೃತ್ಯ ಮಾಡಲು ಸಮಾನ ಅವಕಾಶಗಳಿವೆ. ಆಯ್ಕೆ ನಿಮ್ಮದು ಎಂದು ಹೇಳಿದರು. ಧರ್ಮ ಮಾರ್ಗದಲ್ಲಿ ನಡೆದು ಸದಾ ಜಾಗೃತರಾಗಿ, ಎಂದೂ ದುಶ್ಚಟಗಳಿಗೆ ಬಲಿಯಾಗಬೇಡಿ. ಆದರ್ಶ ವ್ಯಕ್ತತ್ವದೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.

ವಯಸ್ಕರು ಹಾಗೂ ಹಿರಿಯರು ಕೂಡಾ ವ್ಯಸನಮುಕ್ತರಾಗಿ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸಿ, ಬೀದಿ ನಾಟಕ, ಆಕಾಶವಾಣಿ ಹಾಗೂ ಇತರ ಸಮೂಹ ಮಾಧ್ಯಮಗಳ ಮೂಲಕ ಮಂಡಳಿಯು ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುತ್ತಿದೆ ಎಂದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಮೀನಾ ಕುಮಾರಿ ಈಶ್ವರ್ ಪಟಗಾರ್ ಸ್ವಾಸ್ಥ್ಯ ಸಂಕಲ್ಪದ ಕೈಪಿಡಿ ಬಿಡುಗಡೆಗೊಳಿಸಿದರು.

ಸಾಲುಮರದ ತಿಮ್ಮಕ್ಕ ಮಾತನಾಡಿ ಮನೆಯ ವಠಾರದಲ್ಲಿ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.

ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯಿಸ್ ಔಷಧಿಗಳ ರೂಪದಲ್ಲಿ, ಮಾಧ್ಯಮಗಳ ಮೂಲಕ ಮದ್ಯ ಮಾರಾಟದ ಜಾಲ ಯುವ ಜನತೆಯನ್ನು ಅಡ್ಡ ದಾರಿಗೆ ಹೋಗುವಂತೆ ಮಾಡುತ್ತದೆ.

ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಶಾಲಾ-ಕಾಲೇಜುಗಳಲ್ಲಿ ವರ್ಷಕ್ಕೆ ಒಂದು ಸಾವಿರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಆಯೋಜಿಸಿ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇದಕ್ಕಾಗಿ ೯೧೮ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗಿದೆ ಎಂದರು.

ಪ್ರಮಾಣ ವಚನ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಹೊನ್ನವಳ್ಳಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಮಾಣ ವಚನ: ಮದ್ಯಪಾನಾದಿ ಮಾದಕ ದ್ರವ್ಯಗಳ ಆಕರ್ಷಣೆಗೊಳಗಾಗದೆ, ದುಶ್ಚಟಗಳಿಂದ ದೂರವಾಗಿ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು, ಉತ್ತಮ ಸಂಸ್ಕಾರವಂತರಾಗಿ ಆದರ್ಶ ವಿದ್ಯಾರ್ಥಿಗಳಾಗಿ ಸಮಾಜದ ಸತ್ಪ್ರಜೆಗಳಾಗಿ ಉತ್ತಮ ಜೀವನ ನಡೆಸುವುದಾಗಿ ಗಣ್ಯರ ಎದುರು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ, ಹೇಮಾವತಿ ವಿ. ಹೆಗ್ಗಡೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಎನ್. ಕೇಶವ್ ಉಪಸ್ಥಿತರಿದ್ದರು.

ಡಾ. ಬಿ. ಎ. ಕುಮಾರ ಹೆಗ್ಡೆ ಧನ್ಯವಾದವಿತ್ತರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

drug

ಮುಖ್ಯಾಂಶಗಳು:
ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದರು.
108 ವರ್ಷ ವಯಸ್ಸಿನ ಸಾಲುಮರದ ತಿಮ್ಮಕ್ಕ ಪ್ರಮುಖ ಆಕರ್ಷಣೆಯ ಕೇಂದ್ರವಾದರು.
ಸಾಲುಮರದ ತಿಮ್ಮಕ್ಕ ವಿದ್ಯಾರ್ಥಿ ಪ್ರತಿನಿಧಿಗೆ ಒಂದು ಮಾವಿನ ಗಿಡ ನೀಡಿದರು. ಅದನ್ನು ಕಾಲೇಜು ವಠಾರದಲ್ಲಿ ನೆಡಲಾಯಿತು.
ಹೀರೋ-ಹಿರೊಯಿನ್ ಆಗಬೇಕಾದರೆ ಹೆರಾಯಿನ್ ಕುಡಿಯಬೇಕು.
ವ್ಯಸನದಿಂದ ವ್ಯಕ್ತಿತ್ವ ನಾಶವಾಗುತ್ತದೆ.
ಧರ್ಮರಾಯನಿಗೆ ಜೂಜಿನ ವ್ಯಸನವಿತ್ತು.
ದೀಪದ ಬೆಳಕಿಗೆ ಆಕರ್ಷಿತವಾಗಿ ಕ್ರಿಮಿ-ಕೀಟಗಳು ಬಲಿಯಾಗುವಂತೆ ವ್ಯಸನಗಳಿಗೆ ದಾಸರಾದವರು ತಮ್ಮ ವ್ಯಕ್ತಿತ್ವ, ಪ್ರಾಣ-ಮಾನ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ.
ವ್ಯಸನಮುಕ್ತರಾದರೆ ಸಾಲು ಮರದ ತಿಮ್ಮಕ್ಕನಂತೆ ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಿ ಬದುಕಬಹುದು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಮದ್ಯ ವ್ಯಸನಕ್ಕೆ ದಾಸರಾಗುತ್ತಿರುವುದು ಖೇದಕರವಾಗಿದೆ.
ಅನಧಿಕೃತ ಮದ್ಯ ಉತ್ಪಾದನೆ, ಮಾರಾಟ, ಸೇವನೆ ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English