ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿಗೆ ಇಂದು ಶತಾಯುಷಿ ಡಾ.ಸಾಲುಮರದ ತಿಮ್ಮಕ್ಕ ಆಗಮಿಸಿದರು.
ಕಾಲೇಜಿನ ವತಿಯಿಂದ ಹಮ್ಮಿಕೊಂಡಿರುವ ‘ವೃಕ್ಷಾಂಜಲಿ’ ವನ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಅಲೋಶಿಯಸ್ ಪಪೂ ಕಾಲೇಜು ಆವರಣದ ಸಂತ ಮದರ್ ತೆರೆಸಾ ಶಾಂತಿವನದಲ್ಲಿ ಎರಡು ಸಸಿಗಳನ್ನು ನೆಟ್ಟರು.
ಕದಂಬ ಮತ್ತು ಸುರಗಿ ಎಂಬ ಎರಡು ಸಸಿಗಳನ್ನು ನೆಟ್ಟ ಸಾಲುಮರದ ತಿಮ್ಮಕ್ಕ ಅವರು ಅದಕ್ಕೆ ನೀರೆರೆದರು.
ಬಳಿಕ ಕಾಲೇಜಿನ ಟ್ರೀ ಪಾರ್ಕ್‌ನಲ್ಲಿ ಪ್ರಣಾಳ ಗಿಡಗಳ ಉದ್ಯಾನವನ್ನು ಅವರು ಉದ್ಘಾಟಿಸಿದರು.
ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಾಲುಮರದ ತಿಮ್ಮಕ್ಕ, ತನಗೆ ಯಾವುದೇ ವ್ಯವಸ್ಥೆ ಕಲ್ಪಿಸದ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಸ್ವಂತ ಸೂರು ಹೊಂದುವ ತನ್ನ ಕನಸಿಗೆ ಸರಕಾರ ಸ್ಪಂದಿಸಿಲ್ಲ. ಈಗಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ತನ್ನನ್ನು ಪರಿಗಣನೆ ತೆಗೆದುಕೊಂಡೀತು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ. ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಪರಿಸರ ತಜ್ಞ ಉಮೇಶ್ ಬಿ.ಎನ್., ಪರಿಸರ ಪ್ರೇಮಿ ದಿನೇಶ್ ಹೊಳ್ಳ, ಕಾಲೇಜಿನ ರಿಜಿಸ್ಟ್ರಾರ್ ಡಾ.ನರಹರಿ, ತಿಮ್ಮಕ್ಕರ ದತ್ತುಪುತ್ರ ಉಮೇಶ್, ಕಾರ್ಯಕ್ರಮದ ಸಂಯೋಜಕರಾದ ಶಿಲ್ಲಾ ಮತ್ತು ದುರ್ಗಾ ಮೆನನ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English