ಚಿಕ್ಕಮಗಳೂರು: ಮಗ ಸತ್ತ ನೋವು ಮರೆಯಲು ತಾಯಿಯೊಬ್ಬಳು ಸೀರೆಯ ಮೇಲೆ ಲಲಿತ ಸಹಸ್ರ ನಾಮವನ್ನು ಬರೆದು ಶೃಂಗೇರಿಯ ಶಾರದಾಂಬೆಗೆ ಅರ್ಪಣೆ ಮಾಡಿರುವ ವಿಡಿಯೋ ಹಾಗೂ ಫೋಟೋ ಇದೀಗ ವೈರಲ್ ಆಗಿದೆ.
ತಮಿಳುನಾಡು ಮೂಲದ ಪದ್ಮಾ ಮಂಜುನಾಥ್ ಎಂಬುವರೇ ಲಲಿತ ಸಹಸ್ರ ನಾಮ ಬರೆದು ಶಾರದೆಗೆ ಅರ್ಪಣೆ ಮಾಡಿದವರು. ಕಳೆದ ವರ್ಷ ಇವರ ಪ್ರೀತಿಯ ಮಗ ಮೃತಪಟ್ಟಿದ್ದು, ಈ ನೋವನ್ನು ಮರೆಯಲೆಂದೇ ಪದ್ಮಾ ಮಂಜುನಾಥ್ ಸೀರೆಯ ಮೇಲೆ ಸಾವಿರ ನಾಮವನ್ನು ಹೆಣೆದಿದ್ದಾರಂತೆ.
ಪದ್ಮಾ ಮಂಜುನಾಥ್ ಅವರು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವ ಪವಿತ್ರ ಸ್ತೋತ್ರವನ್ನು ಪಠಿಸುತ್ತಾ 09 ಗಜ (15 ಅಡಿ ಉದ್ದ) ಉದ್ದದ ಕಂಚಿನ ರೇಷ್ಮೆ ಸೀರೆಯ ಮೇಲೆ ಹಳದಿ ದಾರದಲ್ಲಿ ಸಣ್ಣ ಸೂಜಿಯಿಂದ ಲಲಿತ ಸಹಸ್ರ ನಾಮ ಸ್ತೋತ್ರವನ್ನ (ಸಾವಿರ ನಾಮ) ಹೆಣೆಯುವ ಮೂಲಕ ದಾಖಲೆ ಮಾಡಿದ್ದಾರೆ. ಅಲ್ಲದೆ ಈ ಸೀರೆಯನ್ನ ಮನೋಹರ ಹಾಗೂ ವೈಭವಯುತವಾಗಿ ಮುತ್ತು, ಹವಳ, ನವರತ್ನಗಳಿಂದ ಅಲಂಕರಿಸಿದ್ದಾರೆ. ಹಾಗಾಗಿ ಇದೊಂದು ದಾಖಲಾರ್ಹ ಕುಸುರಿ ಕೆಲಸವೆಂದರೂ ತಪ್ಪಲ್ಲ ಎನ್ನುತ್ತಿದ್ದಾರೆ ನೋಡಿದವರು.
ಈ ಸೀರೆಯನ್ನ ಪದ್ಮಾ ಮಂಜುನಾಥ್ ಕಳೆದ ವರ್ಷ ಶೃಂಗೇರಿ ಮಠಕ್ಕೆ ಆಗಮಿಸಿ ಉಭಯ ಶ್ರೀಗಳ ಮುಂದೆ ತೋರಿಸಿ ತದನಂತರ ಶೃಂಗೇರಿಯ ಶಾರದಾ ದೇವಿಗೆ ಅರ್ಪಣೆ ಮಾಡಿದ್ದಾರೆ.
Click this button or press Ctrl+G to toggle between Kannada and English