ಮಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್ ಕರಾವಳಿ ಜನರ ಸಾಕಷ್ಟು ನಿರೀಕ್ಷೆಗೆ ಕಾರಣವಾಗಿದೆ. ಹೊಸ ಬಜೆಟ್ನಲ್ಲಿ ಕರಾವಳಿ ಜಿಲ್ಲೆಗೆ ಸಾಕಷ್ಟು ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದು, ಎಷ್ಟರಮಟ್ಟಿಗೆ ಬಜೆಟ್ನಲ್ಲಿ ಕರಾವಳಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕರಾವಳಿ ಜಿಲ್ಲೆಯ ಪ್ರಮುಖ ವಹಿವಾಟುಗಳಲ್ಲಿ ಮುಖ್ಯವಾದದ್ದು ಮೀನುಗಾರಿಕೆ. ವಾರ್ಷಿಕ ಸಾವಿರಾರು ಕೋಟಿ ವಹಿವಾಟು ಇರುವ ಈ ಉದ್ಯಮದಲ್ಲಿ ಉತ್ತಮ ವಹಿವಾಟಾದರೆ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆಗಳು ಸಿಗುತ್ತವೆ. ಸಾವಿರಾರು ಮಂದಿ ಮೀನುಗಾರಿಕೆಯನ್ನೇ ಅವಲಂಬಿಸಿದ್ದು, ಇವರನ್ನು ನಂಬಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಮೀನು ಹಿಡಿಯುವುದರಿಂದ ತೊಡಗಿ ಮೀನು ಮಾರಾಟದವರೆಗೆ ದಿನಂಪ್ರತಿ ಆಗುವ ವಹಿವಾಟುಗಳು ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಿದೆ.
ಆದರೆ ಮೀನುಗಾರರು ತಮ್ಮ ಜೀವದ ಹಂಗು ತೊರದು ಜಿಲ್ಲೆಯ ಅಭಿವೃದ್ದಿಗೆ ಕೊಡುಗೆ ನೀಡುತ್ತಿರುವ ಉದ್ಯಮದಲ್ಲಿ ಇದ್ದರೂ ಅವರಿಗೆ ಬೇಕಾದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ. ಮೀನುಗಾರಿಕೆ ಮಾಡಿ ಬೋಟ್ಗಳು ಲಂಗರು ಹಾಕಬೇಕಾದ ಬಂದರುಗಳಲ್ಲಿ ಬೋಟ್ ನಿಲ್ಲಲು ಜಾಗ ಸಾಕಾಗುತ್ತಿಲ್ಲ. ಮೂಲಭೂತ ಸೌಕರ್ಯಗಳಿಲ್ಲ. ಬೋಟ್ಗಳಿಗೆ ಸಿಗಬೇಕಾದ ಡೀಸೆಲ್ ಸಬ್ಸಿಡಿಯನ್ನು ಹೆಚ್ಚಿಸಲು ಬೇಡಿಕೆಯಿದ್ದರೂ ಈಡೇರುತ್ತಿಲ್ಲ. ಹಲವೆಡೆ ಮೀನುಗಾರರು ಸಂಕಷ್ಟದ ಬದುಕು ಸಾಗಿಸುತ್ತಿದ್ದು, ಮೀನುಗಾರ ಕುಟುಂಬದ ಕಲ್ಯಾಣಕ್ಕೆ ಬೇಕಾದ ಯೋಜನೆಗಳಿಲ್ಲಎಂದು ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಡಲ್ಕೊರೆತ ಸಮಸ್ಯೆಯಿಂದ ತೊಂದರೆಗೊಳಗಾಗುವ ಸಾಕಷ್ಟು ಜನರು ಕಡಲ ತಡಿಯಲ್ಲಿ ಜೀವನಸ ಸಾಗಿಸುತ್ತಿದ್ದಾರೆ. ಅವರ ಜೀವನಕ್ಕೆ ಭದ್ರತೆಯಿಲ್ಲ. ಇವುಗಳಿಗೆ ಕುಮಾರಸ್ವಾಮಿ ಅವರು ಮಂಡಿಸುವ ಬಜೆಟ್ನಲ್ಲಿ ಪ್ರಾತಿನಿಧ್ಯ ನೀಡಿ ಮೀನುಗಾರಿಕಾ ವಿಭಾಗದಲ್ಲಿ ಸಾಕಷ್ಟು ಕೊಡುಗೆಗಳನ್ನು ಇಲ್ಲಿನ ಜನರು ನಿರೀಕ್ಷಿಸುತ್ತಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರೂ ಪ್ರವಾಸೋದ್ಯಮ ಅಭಿವೃದ್ದಿಯತ್ತ ಸರ್ಕಾರ ಗಮನಹರಿಸುವುದನ್ನು ಹಿಂದಿನಿಂದಲೇ ಮರೆತಂತಿದ್ದು, ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ. ಪ್ರವಾಸೋದ್ಯಮ ಅಭಿವೃದ್ದಿಯಾದರೆ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗವಕಾಶ ಸೃಷ್ಟಿಯಾಗಲಿದೆ. ವಹಿವಾಟು ಹೆಚ್ಚುವ ಮೂಲಕ ಮೂಲಕ ಜಿಲ್ಲೆಯ ಅಭಿವೃದ್ದಿಯು ಸಾಧ್ಯವಾಗಲಿದೆ . ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಎಂಬ ಅಭಿಪ್ರಾಯವು ಕೇಳಿಬಂದಿದೆ.
ಇನ್ನು ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಕೊಡುಗೆ ನೀಡುತ್ತಿರುವ ಕರಾವಳಿಯಲ್ಲಿ ರಂಗಮಂದಿರಗಳು ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ರಂಗಮಂದಿರ ಸ್ಥಾಪನೆಗೆ ಸರಕಾರ ಈ ಬಜೆಟ್ನಲ್ಲಿ ಯೋಜನೆಯನ್ನು ಹಾಕಬೇಕೆಂಬ ಆಗ್ರಹವಿದೆ. ಕರಾವಳಿಯ ಕೃಷಿಕರ ಭತ್ತ ಬೇಸಾಯಕ್ಕೆ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕು. ಹೀಗಾಗಿ ಈ ಬಜೆಟ್ನಲ್ಲಿ ಸರಕಾರ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯನ್ನು ಇಲ್ಲಿನ ಜನರು ಹೊಂದಿದ್ದಾರೆ.
Click this button or press Ctrl+G to toggle between Kannada and English