ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಿಸಂಭ್ರಮದ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಮಾಪನ

11:28 AM, Thursday, December 1st, 2011
Share
1 Star2 Stars3 Stars4 Stars5 Stars
(8 rating, 6 votes)
Loading...

subrahmanya champasashti

ಸುಬ್ರಹ್ಮಣ್ಯ : ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಸಂಭ್ರಮದಿಂದ ಚಂಪಾಷಷ್ಠಿ ಬ್ರಹ್ಮರಥೋತ್ಸವ ನಡೆಯಿತು. ಬೆಳಗ್ಗೆ ಬ್ರಹ್ಮರಥದಲ್ಲಿರಿಸಲಾದ ಉತ್ಸವಮೂರ್ತಿಗೆ ದೇವಳದ ಪ್ರಧಾನ ಅರ್ಚಕ ವೆ|ಮೂ| ಬಿ. ಕೇಶವ ಜೋಗಿತ್ತಾಯ ಮತ್ತು ರಾಜೇಶ್‌ ಭಟ್‌ ಆರತಿ ಬೆಳಗಿದರು.

ಸಾಲಂಕೃತ ಪಾಲಕಿಯಲ್ಲಿ ಸುಬ್ರಹ್ಮಣ್ಯ ದೇವರು ಹಾಗೂ ಉಮಾಮಹೇಶ್ವರ ದೇವರ ಉತ್ಸವಮೂರ್ತಿಯನ್ನು ಇರಿಸಿ ದೇವಳದ ಹೊರಾಂಗಣದಲ್ಲಿ ಪ್ರದಕ್ಷಿಣೆ ಬಂದು ಬಳಿಕ ಉಮಾಮಹೇಶ್ವರ ದೇವರನ್ನು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರನ್ನು ಬ್ರಹ್ಮರಥದಲ್ಲಿರಿಸಲಾಯಿತು. ಆರತಿ ಬೆಳಗಿದ ಅನಂತರ ರಥದ ಮೇಲಿಂದ ಭಕ್ತರತ್ತ ಸುವರ್ಣ ವೃಷ್ಠಿ ಹಾಗೂ ಫಲವಸ್ತುಗಳನ್ನು ಎಸೆಯಲಾಯಿತು.

ವರ್ಷದಲ್ಲಿ ಒಂದು ದಿನ ಮಾತ್ರ ಎಳೆಯುವ ಬ್ರಹ್ಮರಥವನ್ನು ಭಕ್ತರು ಬೆತ್ತ ಹಾಗೂ ಬಿದಿರುಗಳಿಂದ ಕಟ್ಟುತ್ತಾರೆ. ಉದ್ದದ ಬೆತ್ತಗಳಿಂದಲೇ ಜೈಕಾರ ಹಾಕುತ್ತಾ ಪಂಚವಾದ್ಯ, ವಾಲಗ, ಬ್ಯಾಂಡ್‌, ಶಂಖ, ಜಾಗಟೆಗಳ ನಿವಾದದೊಂದಿಗೆ ರಥಬೀದಿಯವರೆಗೆ ಎಳೆದು ಆನಂತರ ಸ್ವಸ್ಥಾನಕ್ಕೆ ತಂದಿರಿಸುವರು. ಈ ಬಾರಿ ಒಟ್ಟು 43 ಮಂದಿ ಬ್ರಹ್ಮರಥೋತ್ಸವದ ಸೇವೆ ಸಲ್ಲಿಸಿದ್ದಾರೆ.

ಬುಧವಾರ ರಥಾವರೋಹಣವಾದ ಬಳಿಕ ಕಟ್ಟೆಪೂಜೆ ಜರಗಿ ದ್ವಾದಶಿ ಮಂಟಪದಲ್ಲಿ ವಿಶೇಷ ಪೂಜೆ, ಮಂತ್ರಾಕ್ಷತೆ, ಉತ್ಸವಮೂರ್ತಿ ಗರ್ಭಗುಡಿ ಪ್ರವೇಶಿಸುವುದರೊಂದಿಗೆ ಮಹಾರಥೋತ್ಸವ ಸಮಾಪನಗೊಂಡಿತು.

ಪ್ರಧಾನ ಅರ್ಚಕರು ಬ್ರಹ್ಮರಥೋತ್ಸವ ಸೇವಾರ್ಥಿಗಳಿಗೆ ಮಹಾಪ್ರಸಾದ ನೀಡಿ ಹರಸಿದರಲ್ಲದೆ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ನೀಡಿದರು. ಮಧ್ಯಾಹ್ನ ಸಂತರ್ಪಣೆಯ ಬಳಿಕ 2,500ಕ್ಕೂ ಅಧಿಕ ಮಂದಿ ಮಡೆಮಡೆಸ್ನಾನ ಹರಕೆ ಸಲ್ಲಿಸಿದರು. 22,000ಕ್ಕೂ ಅಧಿಕ ಮಂದಿ ಭೋಜನಪ್ರಸಾದ ಸ್ವೀಕರಿಸಿದರು.

ದೇವಳದ ಆಡಳಿತಾಧಿಕಾರಿ ಸುಂದರ ಭಟ್‌, ಕಾರ್ಯನಿರ್ವಹಣಾಧಿಕಾರಿ ಎಚ್‌.ಎಂ. ಕಾಳಿ, ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ ಮೊದಲಾದವರು ಚಂಪಾಷಷ್ಠಿ ಉತ್ಸವದ ಮೇಲುಸ್ತುವಾರಿ ವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English