ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ ಎರಡು ದಿನಗಳು ನಡೆಯುವ 10ನೇ ಆವೃತ್ತಿಯ ಅಳ್ವಾಸ್ ಪ್ರಗತಿ- ಬೃಹತ್ ಉದ್ಯೋಗ ಮೇಳಕ್ಕೆ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಆಳ್ವಾಸ್ ಪ್ರಗತಿಗೆ ಚಾಲನೆ ನೀಡಿ ಮಾತನಾಡಿ, ತಮ್ಮ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆಯಲು ನಾಡಿನ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆಳ್ವಾಸ್ ಪ್ರಗತಿ ವರದಾನವಾಗಿದೆ. ಪಾರದರ್ಶಕವಾಗಿ ನಡೆಯುವ ಉದ್ಯೋಗಮೇಳದಿಂದಾಗಿ ಯುವಜನರು ಉದ್ಯೋಗ ಪಡೆಯಲು ಬೇಕಾದ ಆತ್ಮವಿಶ್ವಾಸವನ್ನು ಹೆಚ್ಚಿಕೊಳ್ಳುತ್ತಿದ್ದಾರೆ. ಕಂಪೆನಿಗಳನ್ನು ಅಭ್ಯರ್ಥಿಗಳಿಗೆ ಮುಂದೆ ತಂದು, ಅವರಿಗೆ ಉದ್ಯೋಗ ಕಲ್ಪಿಸುವ ಈ ವ್ಯವಸ್ಥೆ ಸರ್ಕಾರಕ್ಕೂ ಮಾದರಿ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಮಾತ್ರವಲ್ಲ, ಔದ್ಯೋಗಿಕವಾಗಿ ಯುವಕರನ್ನು ಸದೃಢಗೊಳಿಸಲು ಕೆಲಸದಿಂದ, ಸೇವಾಮನೋಭಾವವಾಗಿ ಆಳ್ವಾಸ್ ಪ್ರಗತಿಯನ್ನು 9 ವರ್ಷಗಳ ಹಿಂದೆ ಪ್ರಾರಂಭಿಸಿದ್ದೇವೆ. ಸಹಸ್ರಾರು ಮಂದಿ ಉದ್ಯೋಗ ಪಡೆದಿರುವುದು, ಪಡೆಯುತ್ತಿರುವುದರಿಂದ ನಮ್ಮ ಶ್ರಮ ಸಾರ್ಥಕವಾಗುತ್ತಿದೆ.
ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಕೆ.ಅಮರನಾಥ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಐಟಿಸಿ ಲಿಮಿಟೆಡ್‍ನ ಸೀನಿಯರ್ ಎಚ್‍ಆರ್ ಮ್ಯಾನೇಜರ್ ಶ್ರೀನಿವಾಸ ರೈ, ಎಂಫಸಿಸ್ ಕಂಪನಿಯ ಸೀನಿಯರ್ ಎಚ್‍ಆರ್ ಮ್ಯಾನೇಜರ್ ವಿದ್ಯಾರಣ್ಯ ಕೊಲ್ಲಿಪಾಲ್, ಯುಎಇ ಎಕ್ಸ್‍ಚೇಂಜ್‍ನ ಎಚ್‍ಆರ್, ಆಳ್ವಾಸ್‍ನ ಹಳೇ ವಿದ್ಯಾರ್ಥಿ ಗಣೇಶ್ ಮೂಡುಬಿದಿರೆ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿದರು. ಉಪನ್ಯಾಸಕ ಉದಯ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ವಂದಿಸಿದರು.
ಮೊದಲ ದಿನದ `ಪ್ರಗತಿ’
ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗೆ ನಡೆದ ಉಚಿತ ಬೃಹತ್ ಉದ್ಯೋಗಮೇಳ 10ನೇ ಆಳ್ವಾಸ್ ಪ್ರಗತಿಯ ಮೊದಲ ದಿನ 183 ಕಂಪೆನಿಗಳು ಭಾಗವಹಿಸಿದ್ದು, 8,347 ಅಭ್ಯರ್ಥಿಗಳು ಸಂದರ್ಶನ ಎದುರಿಸಿದ್ದಾರೆ. 10,399 ಅನ್‍ಲೈನ್ ನೋಂದಣಿ, 972 ಅಭ್ಯರ್ಥಿಗಳು ಸ್ಥಳದಲ್ಲಿ ನೋಂದಣಿ ಮಾಡಿದ್ದಾರೆ. ಅಭ್ಯರ್ಥಿಗಳಿಗೆ ಶನಿವಾರ ಅಂತಿಮ ಹಂತದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳಿಗೆ ತಮ್ಮ ಅರ್ಹತೆಯ ಉದ್ಯೋಗವನ್ನು ಆಯ್ಕೆ ಮಾಡಲು ವಿಶೇಷ ಕೇಂದ್ರದ ಮೂಲಕ ಮಾಹಿತಿ ನೀಡುವ ವ್ಯವಸ್ಥೆಯನ್ನು ಆಳ್ವಾಸ್ ಕಲ್ಪಿಸಿದೆ. ಕಲರ್ಸ್ ಕೋಡಿಂಗ್, ಉದ್ಯೋಗ ಮಾಹಿತಿ ಕೇಂದ್ರ, ಕಂಪೆನಿಗಳ ವಿವರ, ಉದ್ಯೋಗವಕಾಶ, ಸಂಬಳ ಸಹಿತ ವಿವಿಧ ಮಾಹಿತಿಗಳನ್ನು ಒಳಗೊಂಡ ಫಲಕದ ಮೂಲಕವೂ ಅಭ್ಯರ್ಥಿಗಳಿಗೆ ಅನುಕೂಲವನ್ನು ಕಲ್ಪಿಸಲಾಗಿತ್ತು. ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿರುವ ಆಳ್ವಾಸ್ ಪಿಯು ಕಾಲೇಜು, ಪದವಿಪೂರ್ವ ಕಾಲೇಜು, ಲೈಬ್ರರಿ ಬ್ಲಾಕ್‍ಗಳ 800 ಕೊಠಡಿಗಳಲ್ಲಿ ಸಂದರ್ಶನದ ವ್ಯವಸ್ಥೆ ಮಾಡಲಾಯಿತು. ಕಂಪೆನಿ ಹಾಗೂ ಅಭ್ಯರ್ಥಿಗಳ ನಡುವೆ ಕೊಂಡಿಯಾಗಿ ಆಳ್ವಾಸ್‍ನ 1,200 ವಿದ್ಯಾರ್ಥಿ ಸ್ವಯಂಸೇವಕರು, ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.
Click this button or press Ctrl+G to toggle between Kannada and English