ಮಂಗಳೂರು : ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾರಂಗದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಪ್ರಜ್ವಲ್ ಯುವಕ ಮಂಡಲ (ರಿ) ಈಗ ಇಪ್ಪತ್ತು ವರ್ಷದ ಸಂಭ್ರಮದಲ್ಲಿದೆ. ಮಂಗಳೂರು ನಗರದ ಸೂಟರ್ ಪೇಟೆಯಲ್ಲಿ ಯುವಕರ ಸಂಘಟನೆ ಯೊಂದು ಇಪ್ಪತ್ತು ವರ್ಷಗಳ ಹಿಂದೆ ಸ್ಥಾಪನೆಗೊಂಡು ನಿರಂತರವಾಗಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಮಹಾನ್ ಸಾಧನೆಯೇ ಸರಿ.
1998ರ ಜೂನ್ -28ರಂದು ಉದ್ಘಾಟನೆಗೊಂಡ ಪ್ರಜ್ವಲ್ ಯುವಕ ಮಂಡಲ ತನ್ನ ಇಪ್ಪತ್ತು ವರ್ಷಗಳನ್ನು ಪೂರೈಸಿದ ವಿಂಶತಿ ಸಂಭ್ರಮವನ್ನು ಜುಲೈ-8ರಂದು ಆಚರಿಸುತ್ತಿದೆ. ಒಂದು ಅರ್ಥಪೂರ್ಣ ಕಾರ್ಯಕ್ರಮದ ಜೊತೆಗೆ ಈ ಯುವಕ ಮಂಡಲದ ಏಳಿಗೆಗೆ ಶ್ರಮಿಸಿದ ಅಧ್ಯಕ್ಷರುಗಳನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡಿದೆ. ಜೊತೆಗೆ ಯಕ್ಷಗಾನ, ನೃತ್ಯ ವೈಭವ, ಜಾದೂ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಗೋಳಿದಡಿಗುತ್ತುಶ್ರೀ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಶ್ರೀ ಸೀತಾರಾಮ್ ಕೊಂಚಾಡಿ,ಶ್ರೀರಾಘವೇಂದ್ರ ಗುರಿಕಾರ, ಶ್ರೀ ಕೆ.ಪಾಂಡುರಂಗ, ತುಳು ಚಿತ್ರ ನಟ ಪೃಥ್ವಿ ಅಂಬರ್ , ಪೃಥ್ವಿರಾಜ್ ಬಂಗೇರ, ಪಿ. ಬಾಬು , ಕೆ.ಕೆ.ಪೇಜಾವರ , ಎಸ್ . ಜಗದೀಶ್ಚಂದ್ರ ಅಂಚನ್ ಸೇರಿದಂತೆ ಅನೇಕ ಗಣ್ಯರ ಭಾಗವಹಿಸುವಿಕೆಯಲ್ಲಿ ಸಭಾ ಕಾರ್ಯಕ್ರಮ ಕೂಡ ಸಂಯೋಜನೆ ಗೊಂಡಿದೆ.
ಮಂಗಳೂರು ತಾಲೂಕಿನಲ್ಲಿ ಒಂದು ಉತ್ತಮ ಯುವಕ ಮಂಡಲವಾಗಿ ಸದ್ದಿಲ್ಲದೆ ಯುವ ಸಂಘಟನೆಯ ಜೊತೆಗೆ ಸಾಮಾಜಿಕ ಸ್ಪಂದನೆಯ ಕಾರ್ಯಗಳೊಂದಿಗೆ ಗುರುತಿಸಿ ಕೊಂಡಿರುವ ‘ಪ್ರಜ್ವಲ್ ಯುವಕ ಮಂಡಲ’ ಪರಿಸರದ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ.
1998ರಲ್ಲಿ ಪಾಂಡೇಶ್ವರ ಪೋಲಿಸ್ ಠಾಣೆಯ ಆಗಿನ ಸಬ್ ಇನ್ಸ್ ಪೆಕ್ಟರ್ ಶ್ರೀ ಟಿ.ಬಿ. ರಾಜಣ್ಣ ಅವರಿಂದ ಉದ್ಘಾಟಿಸಲ್ಲಟ್ಟ ಪ್ರಜ್ವಲ್ ಯುವಕ ಮಂಡಲ , ಇಂದು ಕೂಡ ತನ್ನ ಆಸ್ತಿತ್ವವನ್ನು ಉಳಿಸಿ ಕೊಂಡಿರುವುದು ಮಾತ್ರವಲ್ಲ ಇಪ್ಪತ್ತು ವರ್ಷಗಳ ಕಾಲ ನಿರಂತರವಾಗಿ ಕಾರ್ಯ ಚಟುವಟಿಕೆಗಳ ಮೂಲಕ ಖಂಡಿತವಾಗಿಯೂ ಪ್ರಜ್ವಲಿಸುತ್ತಿದೆ. ಅಂದು ಶ್ರೀ ಟಿ.ಬಿ. ರಾಜಣ್ಣ ಅವರು ಉದ್ಘಾಟನಾ ಭಾಷಣದಲ್ಲಿ ” ಯುವ ಸಂಘಟನೆಯ ಮೌಲ್ಯ ಎದ್ದು ಕಾಣ ಬೇಕಾದರೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಯುವಕರು ಹೆಚ್ಚು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು ” ಎಂದು ಕರೆ ನೀಡಿದ್ದರು.ಇವರ ಕರೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಇಂದಿನ ವರೆಗೆ ಪ್ರಜ್ವಲ್ ಯುವಕ ಮಂಡಲ ಪಾಲಿಸಿ ಕೊಂಡು ಬಂದಿದೆ.
ಶ್ರೀ ಯಾದವ್ ಮಜಿಲಕೋಡಿ, ಶ್ರೀ ಎಸ್.ವಿ. ಶಿವಪ್ರಸಾದ್ , ಶ್ರೀ ಜಗನ್ನಾಥ್ , ಶ್ರೀ ಲಕ್ಷಣ್ ಪಡೀಲ್ , ಪ್ರಮೋದ್ , ರವೀಂದ್ರ, ಅನಿಲ್ ಪೆರಿಸ್ ಇವರು ಯುವಕ ಮಂಡಲದ ಅಧ್ಯಕ್ಷರಾಗಿ ಶ್ರಮಿಸಿದ್ದಾರೆ. ಯುವಕ ಮಂಡಲದ ಸ್ಥಾಪನೆ ಹಂತದಲ್ಲಿ ಶ್ರೀ ರಘುನಾಥ್ ಅವರು ಶ್ರಮವನ್ನು ಕೂಡ ಇಲ್ಲಿ ಸ್ಮರಿಸಲೇ ಬೇಕು. ಶ್ರೀ ಎಸ್ ಸುರೇಶ್ , ಶ್ರೀ ಎಸ್. ಸೀತಾರಾಮ್ ಸಾಲ್ಯಾನ್ , ಪಿ.ಬಾಬು, ದಿವಂಗತ ಎಸ್.ವಿ.ಚಂದ್ರಶೇಖರ್ , ಕು.ಅಪ್ಪಿ ಎಸ್.(ಕಾರ್ಪೋರೆಟರ್), ಶ್ರೀ ಕೆ.ಕೆ.ಪೇಜಾವರ್ , ಶ್ರೀ ಎಸ್. ಜಗದೀಶ್ಚಂದ್ರ ಅಂಚನ್ ಅವರುಗಳ ಸೂಕ್ತ ಮಾರ್ಗದರ್ಶನದಲ್ಲಿ ಈ ಯುವಕ ಮಂಡಲ ಇಷ್ಟು ಎತ್ತರಕ್ಕೆ ಬೆಳೆದಿದೆ. ಈ ನಿಟ್ಟಿನಲ್ಲಿ “ಯುವ ಮನಸ್ಸುಗಳನ್ನು ಸೃಜನಾತ್ಮಕವಾಗಿ ಬೆಳೆಸುವಲ್ಲೂ” ಪ್ರಜ್ವಲ್ ಯುವಕ ಮಂಡಲದ ಎಲ್ಲಾ ಪದಾಧಿಕಾರಿಗಳು ಶ್ರಮಿಸಿದ್ದಾರೆ. ಪ್ರತಿವರ್ಷವೂ ಸುಮಾರು 300ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯನ್ನು ಸತತ 13 ವರ್ಷಗಳಿಂದ ಮಾಡುತ್ತಿರುವ ಈ ಯುವಕ ಮಂಡಲ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ.
ಪ್ರತಿವರ್ಷ ಯುವಕ ಮಂಡಲದ ವಾರ್ಷಿಕೋತ್ಸವ ಸಂದರ್ಭದಲ್ಲಿ ಊರ – ಪರ ಊರ ಸಾಧಕರನ್ನು ಹಾಗೂ ಜನಪ್ರತಿನಿಧಿಗಳನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ . ಮುಖ್ಯವಾಗಿ ಕ್ರೀಡಾಕ್ಷೇತ್ರದಲ್ಲಿ ಯುವಕರನ್ನು ತೊಡಗಿಸಿಕೊಂಡು ನೂರಾರು ಪ್ರಶಸ್ತಿಗಳನ್ನು ಪ್ರಜ್ವಲ್ ಯುವಕ ಮಂಡಲ ಕ್ರಿಕೆಟ್ ಪಂದ್ಯಾಟಗಳಲ್ಲಿ ಬಾಚಿ ಕೊಂಡಿದೆ.
ಕಳೆದ ವರ್ಷ ‘ ಬಲೇ ಗೊಬ್ಬುಗ ಕೆಸರ್ಡೊಂಜಿ ದಿನ ‘ ಕ್ರೀಡೋತ್ಸವವನ್ನು ಸಂಘಟಿಸಿದ ಪ್ರಜ್ವಲ್ ಯುವಕ ಮಂಡಲ ಅಪಾರ ಜನ ಮನ್ನಣೆಯನ್ನು ಗಳಿಸಿದೆ. ಈ ಕ್ರೀಡೋತ್ಸವ ನಗರ ಪ್ರದೇಶದಲ್ಲಿ ಪ್ರಪ್ರಥಮವಾಗಿ ನಡೆಸಿದ ಹೆಗ್ಗಳಿಕೆಗೆ ಪ್ರಜ್ವಲ್ ಯುವಕ ಮಂಡಲ ಪಾತ್ರವಾಗಿದೆ. ಈ ಕ್ರೀಡೋತ್ಸವ ಅತ್ಯಂತ ಯಶಸ್ಸನ್ನು ಪಡೆದು, ಈ ಬಾರಿಯೂ ನಡೆಸುವಂತೆ ಬೇಡಿಕೆ ಬಂದಿದೆ. ಈ ಎಲ್ಲ ಕಾರ್ಯಕ್ರಮಗಳ ಜೊತೆಗೆ ಊರಿನ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗಿಯಾಗಿ “ಜನಸ್ನೇಹಿ” ಯುವಕ ಮಂಡಲವಾಗಿ ಬೆಳೆದಿದೆ.
ಒಟ್ಟಿನಲ್ಲಿ ಕಲೆ, ಸಾಹಿತ್ಯ , ಕ್ರೀಡೆ , ಸಾಂಸ್ಕೃತಿಕ, ಸಾಮಾಜಿಕ , ಧಾರ್ಮಿಕ ಸೇವೆಗಳನ್ನೊಳಗೊಂಡು ಸಮ್ಮಿಳಿತ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವ ಪ್ರಜ್ವಲ್ ಯುವಕ ಮಂಡಲ ತನ್ನ ಅರ್ಥಪೂರ್ಣ ಸಂಘಟನೆಯಲ್ಲಿ ಇಪ್ಪತ್ತು ವರ್ಷಗಳನ್ನು ಪೂರೈಸಿದ್ದು ದೊಡ್ಡ ಸಾಧನೆ. ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪ್ರಜ್ವಲ್ ಯುವಕ ಮಂಡಲ ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಅಭಿವೃದ್ಧಿ ಕಾಣಲಿ ಎಂದು ಇಪ್ಪತ್ತು ವರ್ಷದ ವಿಂಶತಿ ಆಚರಣೆಯ ಈ ಪರ್ವಕಾಲದಲ್ಲಿ ಶುಭ ಆಶಿಸೋಣ.
Click this button or press Ctrl+G to toggle between Kannada and English