ಉಡುಪಿ: ಮಳೆಗಾಲ ಬಂತಂದ್ರೆ ಸಾಕು ಕಡಲತಡಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡುತ್ತವೆ.. ಕಡಲ್ಕೊರೆತಕ್ಕೆ ಸಿಕ್ಕಿ ತಡಿಯ ಭೂಭಾಗವು ಕಡಲಿನ ಒಡಲನ್ನು ಸೇರುತ್ತವೆ. ಈ ಬಾರಿಯೂ ಆ ಆತಂಕ ಮತ್ತೆ ಮುಂದುವರೆದಿದ್ದು, ಮನೆ-ಮಠಗಳು ಕಡಲಗರ್ಭ ಸೇರಿದರೆ ಅಚ್ಚರಿಯಿಲ್ಲ.
ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಒದಗಿಸದ ಹೊರತು, ಕಾಟಾಚಾರದ ಪರಿಹಾರ ನೀರಲ್ಲಿಟ್ಟ ಹೋಮದಂತಾಗಿದೆ.. ಈಗ ಉಡುಪಿಯ ಪಡುಕೆರೆ ಪ್ರದೇಶದ ಕಡಲತೀರದಲ್ಲಿ ಕಡಲ್ಕೊರೆತ ಸಂಭವಿಸಿ ಬಹುಭಾಗ ಕಡಲಿನ ಒಡಲು ಸೇರಿದ್ದು ಇದಕ್ಕೊಂದು ಉದಾಹರಣೆ.
ಮಳೆಗಾಲದಲ್ಲಿ ಪ್ರತಿ ವರ್ಷ ಸಮುದ್ರ ತೀರದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ. ಕಡಲತೀರದ ಬಹುಭಾಗ ಕೊಚ್ಚಿಹೋಗುತ್ತದೆ. ಸಮುದ್ರ ತೀರದಲ್ಲಿ ವಾಸಿಸುವ ಜನ ಆತಂಕದ ದಿನಗಳನ್ನು ಎದುರಿಸಲೇಬೇಕಾಗುತ್ತದೆ. ಕಾರಣ ರಾತ್ರಿಯ ಸಮಯದಲ್ಲಿ ಮಳೆ ಸುರಿಯುವಾಗ ಒಂದೇ ಸಮನೆ ಭೀಮ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತವೆ. ಸಮುದ್ರ ದಡವನ್ನು ದಾಟಿ ಬಂದು ಭೂಭಾಗವನ್ನೇ ಕಬಳಿಸುತ್ತವೆ. ಅತೀ ವೇಗದಲ್ಲಿ ಬೀಸುವ ಗಾಳಿಯ ಹೊಡೆತಕ್ಕೆ ಸಮುದ್ರ ವಾಸಿಗಳ ಮನೆಗಳು ಹಾನಿಗೊಳಗಾಗುತ್ತವೆ. ಪಡುಕೆರೆ ತೊಟ್ಟಂ ಉದ್ಯಾವರ ಮತ್ತು ಕುಂದಾಪುರದ ಮರವಂತೆ, ಗಂಗೊಳ್ಳಿ ಮುಂತಾದೆಡೆ ಕಡಲು ಸಾಕಷ್ಟು ಭೂಭಾಗವನ್ನು ಕಬಳಿಸಿದೆ.
ಪ್ರತೀ ವರ್ಷ ಕಡಲ್ಕೊರೆತ ಸಂಭವಿಸುವ ಕಾರಣ ಜಿಲ್ಲಾಡಳಿತವು ವಿಪತ್ತು ನಿರ್ವಹಣೆಗಾಗಿ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಕಡಲ ತೀರದಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ಹಾಕಲಾಗುತ್ತದೆ. ಆದರೆ ಪ್ರತೀ ವರ್ಷವೂ ಮಳೆಗಾಲದಲ್ಲಿ ಭೋರ್ಗರೆಯುವ ಸಮುದ್ರದ ಅಲೆಗಳು ಕಲ್ಲಿನ ತಡೆಗೋಡೆಯನ್ನೂ ಬೇಧಿಸಿವೆ. ಸಮುದ್ರ ತೀರದಲ್ಲಿ ವಾಸಿಸುವ ಜನ ಆತಂಕದಿಂದ ದಿನಕಳೆಯುತ್ತಿದ್ದಾರೆ. ಕೆಲವೆಡೆ ತೀರವಾಸಿಗಳು ಸ್ಥಳಾಂತಗೊಳ್ಳುತ್ತಿದ್ದಾರೆ.
ಕಡಲ್ಕೊರೆತದ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಸರ್ಕಾರ ಚಿಂತನೆ ಮಾಡಬೇಕು ಬ್ರೇಕ್ ವಾಟರ್ ನಿರ್ಮಾಣ ಮಾಡುವ ಮೂಲಕ ಶಾಶ್ವತವಾಗಿ ಪರಿಹಾರ ಮಾಡಬೇಕು ಎನ್ನುವ ತೀರ ವಾಸಿಗಳ ಹಲವು ವರುಷಗಳ ಬೇಡಿಕೆ ಇನ್ನೂ ಈಡೇರಿಲ್ಲ..
ಪ್ರತೀ ವರ್ಷ ಕಡಲ್ಕೊರೆತ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಇದಕ್ಕೆ ಶಾಶ್ವತವಾದ ಪರಿಹಾರ ಇನ್ನೂ ಸಿದ್ದವಾಗಿಲ್ಲ. ಮೀನುಗಾರರು ಮತ್ತು ಸಮುದ್ರ ತೀರದಲ್ಲಿ ವಾಸಿಸುವ ಜನರಿಗೆ ಪ್ರತೀ ಮಳೆಗಾಲವೂ ಕಷ್ಟದ ದಿನಗಳಾಗಿವೆ. ಚುನಾವಣೆ ಕಾಲದಲ್ಲಿ ಜನಪ್ರತಿನಿಧಿಗಳು ಜನರಿಗೆ ಭರವಸೆ ನೀಡಿ ಬೆನ್ನುಹಾಕುತ್ತಾರೆ. ಮಳೆಗಾಲದಲ್ಲಿ ಒಂದಿಷ್ಟು ಲಕ್ಷ ಹಣ ವ್ಯಯಮಾಡಿ ಸಮುದ್ರಕ್ಕೆ ಕಲ್ಲು ಹಾಕಿ ನೀರಿನಲ್ಲಿ ಹೋಮ ಮಾಡುತ್ತಾರೆ. ಆದ್ದರಿಂದ ಜಿಲ್ಲಾಡಳಿತ ಇನ್ನಾದ್ರೂ ಶಾಶ್ವತ ಪರಿಹಾರ ಒದಗಿಸುವ ಅಗತ್ಯವಿದೆ..
Click this button or press Ctrl+G to toggle between Kannada and English