ಮಂಗಳೂರು: ಕಳೆದ ವರ್ಷ ಜುಲೈ 20 ರಂದು ನಡೆದ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಎಸ್ಐಟಿಗೆ ನೀಡಬೇಕೆಂದು ಕಾವ್ಯ ಹೆತ್ತವರು ಮತ್ತು ಜಸ್ಟಿಸ್ ಫಾರ್ ಕಾವ್ಯ ಹೋರಾಟ ಸಮಿತಿ ಆಗ್ರಹಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾವ್ಯ ತಾಯಿ ಬೇಬಿ ಪೂಜಾರಿ, ಕಾವ್ಯ ಮೃತಪಟ್ಟು ವರ್ಷವಾಗುತ್ತಿದೆ. ಆದರೆ ಮಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗತಿಯ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡುತ್ತಿಲ್ಲ. ಕೇಳಿದರೆ ಒಂದು ವರದಿ ಬರಲು ಬಾಕಿಯಿದೆ ಎನ್ನುತ್ತಾರೆ ಎಂದರು.
ಜಸ್ಟಿಸ್ ಫಾರ್ ಕಾವ್ಯ ಹೋರಾಟ ಸಮಿತಿಯ ಸಂಚಾಲಕ ದಿನಕರ್ ಶೆಟ್ಟಿ ಮಾತನಾಡಿ, ಕಾವ್ಯ ಸಾವಿನ ಪ್ರಕರಣವನ್ನು ಭೇದಿಸಲು ಪೊಲೀಸ್ ಇಲಾಖೆ ವಿಫಲವಾಗಿದ್ದು, ಪ್ರಕರಣದ ತನಿಖೆಯನ್ನು ಎಸ್ಐಟಿಗೆ ನೀಡಬೇಕೆಂದು ಆಗ್ರಹಿಸಿದರು.
ಕಾವ್ಯ ಮೃತಪಟ್ಟು ಜುಲೈ 20 ಕ್ಕೆ ಒಂದು ವರ್ಷವಾಗುವ ಹಿನ್ನೆಲೆಯಲ್ಲಿ ಕಾವ್ಯಳ ಆತ್ಮಕ್ಕೆ ಶಾಂತಿ ಸಿಗುವ ನಿಟ್ಟಿನಲ್ಲಿ ಅಂದು ಬಲ್ಮಠದ ಆರ್ಯ ಸಮಾಜದಲ್ಲಿ ವಿಶೇಷವಾದ ಯಜ್ಞವನ್ನು ನಡೆಸಿ ಶೃದ್ಧಾಂಜಲಿ ಸಭೆ ನಡೆಸಲಾಗುವುದು. ಅದೇ ದಿನ ಸಂಜೆ 6.15 ಕ್ಕೆ ಬಲ್ಮಠದ ಕಲೆಕ್ಟರ್ ಗೇಟ್ ಬಳಿ ಮೇಣದ ಬತ್ತಿ ಹಿಡಿದು ಪ್ರಕರಣವನ್ನು ಎಸ್ಐಟಿ ತನಿಖೆಗೆ ನೀಡುವಂತೆ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.
Click this button or press Ctrl+G to toggle between Kannada and English