ಮಂಗಳೂರು: ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿರಾಮ ಪಡೆದಿದ್ದ ಮಳೆರಾಯ ಮತ್ತೆ ಅಬ್ಬರಿಸತೊಡಗಿದ್ದಾನೆ . ಎರಡು ದಿನಗಳಿಂದ ಕರಾವಳಿಯಲ್ಲಿ ಮುಂಗಾರು ಕ್ಷೀಣಗೊಂಡಿತ್ತು. ಆದರೆ ಇಂದು ಮಳೆ ಅಬ್ಬರ ಮತ್ತೇ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದ ಜಡಿ ಮಳೆ ಆರಂಭಗೊಂಡಿದೆ. ಪರಿಣಾಮ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಮಂಗಳೂರಿನಾದ್ಯಂದ ಮಳೆ ಸುರಿಯುತ್ತಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು ಬೆಳಕಿಗೆ ಬಂದಿವೆ. ಇಡ್ಕಿದು ಮಿತ್ತೂರು ತಿರುವಿನಲ್ಲಿ ರಸ್ತೆ ಪಕ್ಕದ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಮುಂದಿನ 48 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರಾವಳಿಯ ದಕ್ಷಿಣ ಕನ್ನಡ ,ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆ ಕೆಲವು ಪ್ರದೇಶಗಳಲ್ಲಿ ಅತಿಯಾದ ಮಳೆ ಬೀಳಲಿದೆ ಎಂದು ಇಲಾಖೆ ತಿಳಿಸಿದೆ.
ಇನ್ನೊಂದೆಡೆ ಪುನರ್ವಸು ಮಳೆಯ ಅಬ್ಬರಕ್ಕೆ ಮಲೆನಾಡು ಭಾಗ ತತ್ತರಿಸಿದೆ. ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ನದಿ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಡಲು ಪ್ರಕ್ಷುಬ್ದಗೊಂಡಿರುವ ಕಾರಣ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
Click this button or press Ctrl+G to toggle between Kannada and English