ಮಂಗಳೂರು: ಕಾಂಕ್ರೀಟ್ ರಸ್ತೆ ಕಾಮಗಾರಿ ಬಳಿಕ ಶಿರಾಡಿ ಘಾಟ್ ಮಾರ್ಗ ವಾಹನಗಳಿಗೆ ಮುಕ್ತವಾಗಿದೆ. ಆದರೆ, ಲಘು ವಾಹನಗಳು ಮಾತ್ರ ಸಂಚಾರ ನಡೆಸಬಹುದು. ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಭಿವೃದ್ಧಿಗೊಂಡಿರುವ ಶಿರಾಢಿ ಘಾಟ್ ರಸ್ತೆಯನ್ನು ಉದ್ಘಾಟಿಸಿದ್ದಾರೆ. ಭಾನುವಾರ ಮಧ್ಯಾಹ್ನ 3ಗಂಟೆಯಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೊದಲ ದಿನ ಸಾವಿರಕ್ಕೂ ಅಧಿಕ ವಾಹನಗಳು ಕಾಂಕ್ರೀಟ್‌ರಸ್ತೆಯಲ್ಲಿ ಸಂಚಾರ ನಡೆಸಿದವು. ಮೊದಲ ದಿನ ಕಾರು, ಬಸ್, ಕಂಟೈನರ್ ಸೇರಿದಂತೆ ಎಲ್ಲಾ ವಿಧದ ವಾಹನಕ್ಕೆ ಅವಕಾಶ ನೀಡಲಾಯಿತು. ಆದರೆ, ರಸ್ತೆಯ ಕೆಲಭಾಗದಲ್ಲಿ ತಡೆಗೋಡೆ ಕುಸಿತಗೊಂಡಿದೆ.
ಆದ್ದರಿಂದ, ಭಾರೀ ವಾಹನಗಳ ಸಂಚಾರಕ್ಕೆ ನಿಷೇದ ಹೇರುವ ತೀರ್ಮಾನ ಕೈಗೊಳ್ಳಲಾಗಿದೆ. 15 ದಿನಗಳ ಕಾಲ ಶಿರಾಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳು ಸಂಚಾರವನ್ನು ನಡೆಸುವಂತಿಲ್ಲ.
ಸಚಿವ ಯು.ಟಿ.ಖಾದರ್ ಈ ಕುರಿತು ಮಾಹಿತಿ ನೀಡಿದ್ದು, ‘ಶಿರಾಡಿ ಘಾಟ್‌ನಲ್ಲಿ ತಡೆಗೋಡೆ ನಿರ್ಮಾಣ ಕೆಲಸ ಇನ್ನೂ ಬಾಕಿ ಇದೆ. ಆದ್ದರಿಂದ, 15 ದಿನಗಳ ಕಾಲ ಭಾರೀ ವಾಹನ ನಿಷೇಧಿಸಲಾಗಿದೆ’ ಎಂದು ಹೇಳಿದ್ದಾರೆ.
ಅಪಾಯಕಾರಿ ವಲಯದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು 15 ದಿನದಲ್ಲಿ ಪೂರ್ಣಗೊಳಿಸಬೇಕು ಎಂದು ಟೆಂಡರ್ ಪಡೆದವರಿಗೆ ಸೂಚನೆ ನೀಡಲಾಗಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯುದ್ದಕ್ಕೂ 50 ಕಿ.ಮೀ. ವೇಗದ ಮಿತಿ ನಿಗದಿಗೊಳಿಸಲಾಗಿದೆ.
Click this button or press Ctrl+G to toggle between Kannada and English