ಮಂಗಳೂರು : ಬಡವರು, ಕಾರ್ಮಿಕರು ಸೇರಿದಂತೆ ಜನಸಾಮಾನ್ಯರಿಗೆ ವರದಾನವಾಗಿರುವ ರಾಜ್ಯ ಸರಕಾರದ ಜನಪ್ರಿಯ ಯೋಜನೆ ‘ಇಂದಿರಾ ಕ್ಯಾಂಟೀನ್’ ನಗ ರದ ನಾಲ್ಕು ಕಡೆ ಈಗಾಗಲೇ ಕಾರ್ಯಾಚರಿಸುತ್ತಿದ್ದು, ಐದನೇ ಕ್ಯಾಂಟೀನ್ ಮಂಗಳೂರಿನ ಪಂಪ್‌ವೆಲ್‌ನಲ್ಲಿ ಉದ್ಘಾಟಿಸಲಾಯಿತು. ಬೆಳಗ್ಗೆ 11 ಗಂಟೆಗೆ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಅವರು ಉದ್ಘಾಟಿಸಿದರು, ಮೇಯರ್ ಭಾಸ್ಕರ್ ಕೆ. ಅಧ್ಯಕ್ಷತೆ ವಹಿಸಿದರು.
ಪಂಪ್‌ವೆಲ್‌ನಲ್ಲಿ ಮೂರು ತಿಂಗಳ ಹಿಂದೆಯೇ ಸಿದ್ಧಗೊಂಡಿದ್ದ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಇತ್ತೀಚೆಗೆ ನಡೆದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೂತನ ಕ್ಯಾಂಟೀನ್‌ಗೆ ಉದ್ಘಾಟನೆ ಭಾಗ್ಯ ಲಭಿಸಿರಲಿಲ್ಲ.
ಪಾಲಿಕೆಯ 5,93,291 ಜನಸಂಖ್ಯೆಯ ಆಧಾರದಲ್ಲಿ ನಗರದಲ್ಲಿ ಒಟ್ಟು 6 ಕ್ಯಾಂಟೀನ್ ಹಾಗೂ ಸುಸಜ್ಜಿತ ಅಡುಗೆ ಕೋಣೆಯನ್ನು ಆರಂಭಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಈ ಪೈಕಿ ಒಂದು ಕ್ಯಾಂಟೀನ್ ಉಳ್ಳಾಲ ನಗರ ಸಭೆ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ಆರಂಭವಾಗಿದೆ. ಇನ್ನುಳಿದಂತೆ ಸುರತ್ಕಲ್, ಕಾವೂರು, ಲೇಡಿಗೋಷನ್, ಉರ್ವದಲ್ಲಿ ಇಂದಿರಾ ಕ್ಯಾಂಟಿನ್ ಕಾರ್ಯಚರಿಸುತ್ತಿವೆ.
ಪಂಪ್‌ವೆಲ್ ವೃತ್ತದ ಬಳಿ ಇಂದಿರಾ ಕ್ಯಾಂಟೀನ್‌ನ ನಿರ್ಮಾಣ ಕಾಮಗಾರಿಯನ್ನು ಕೆಇಎಫ್ ಸಂಸ್ಥೆ ನಿರ್ವಹಿಸಿತ್ತು. ಟೋಕನ್ ನೀಡುವ ಕೌಂಟರ್, ಆಹಾರ ವಿತರಿಸುವ ಕೌಂಟರ್ ಸೇರಿದಂತೆ ಎಲ್ಲ ಕಾಮಗಾರಿಗಳೂ ಇದೀಗ ಪೂರ್ಣಗೊಂಡಿದೆ. ಕಟ್ಟಡದ ಸುತ್ತ-ಮುತ್ತ ಕಬ್ಬಿಣದ ಸರಳುಗಳಿಂದ ಭದ್ರತೆಯನ್ನು ಒದಗಿಸಲಾಗಿದೆ. ಇಲ್ಲಿಯೂ 5 ರೂ.ಗೆ ತಿಂಡಿ ಹಾಗೂ 10 ರೂ.ಗೆ ಊಟದ ಸೌಲಭ್ಯ ದೊರೆಯಲಿದೆ.
Click this button or press Ctrl+G to toggle between Kannada and English