ಮಂಗಳೂರು : ಮಂಗಳೂರು ಮಹಾನಗರದ ಜನರ ಪರವಾಗಿ ಪುರಭವನದಲ್ಲಿ ಪರ್ಯಾಯ ಪೀಠಾರೋಹಣಗೈಯಲಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರಿಗೆ ಅಭಿವಂದನಾ ಹಾಗೂ ಪೌರಸಮ್ಮಾನ ಕಾರ್ಯಕ್ರಮ ನಡೆಯಿತು.
ಪೌರಸಮ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಕಷ್ಟ ಸುಖಗಳೆರಡೂ ಜೀವನದ ಪರ್ಯಾಯ ಅಂಗಗಳು. ಅದನ್ನು ಎಲ್ಲರೂ ಅನುಭವಿಸಬೇಕು ಸುಖವನ್ನು ಮಾತ್ರ ಬಯಸಿ ದುಃಖವನ್ನು ಕಡೆಗಣಿಸುವುದು ಧರ್ಮ ಅಲ್ಲ. ದುಃಖ ಬಂದಾಗ ಸ್ವೀಕರಿಸಿ ಭಗವಂತನ ಸ್ಮರಣೆ, ಭಕ್ತಿಯಿಂದ ಭವದ ದುಃಖಗಳಿಂದ ಪಾರಾಗಿ ಆತ್ಮೋನ್ನತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಹೇಳಿದರು.
ಶ್ರೀ ಮಧ್ವಾಚಾರ್ಯರು ಹಾಕಿಕೊಟ್ಟ ಪರಂಪರೆಯಲ್ಲಿ ಉಡುಪಿಯಲ್ಲಿ ಪರ್ಯಾಯ ನಡೆಯುತ್ತಿದ್ದು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಕಾಣದೆ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ ಎಂದರು. ಇದೀಗ ಈ ಪರ್ಯಾಯ ಪೀಠವನ್ನು ಏರಿ ದೇವರ ಪೂಜೆಯನ್ನು ಮಾಡುವ ಅವಕಾಶವನ್ನು ಪಡೆದಿದ್ದೇನೆ ಈ ಶುಭಮಹೂರ್ತದಲ್ಲಿ ಮಂಗಳೂರಿನ ಜನತೆ ನನಗೆ ಸ್ವಾಗತಿಸಿ ಅಭಿಮಾನ ತೋರಿಸಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರು ಸ್ವಾಮೀಜಿಯವರ ಪರ್ಯಾಯ ಪೀಠಾರೋಹಣದ ಅವಧಿಯಲ್ಲಿ ಹಿಂದೂ ಸಮಾಜ ಇನ್ನಷ್ಟು ಉನ್ನತಿಯೆಡೆಗೆ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್, ಕಾರ್ಪೊರೇಶನ್ ಬ್ಯಾಂಕಿನ ಮಹಾಪ್ರಬಂಧಕ ಬಿ.ಆರ್ ಭಟ್, ಎ. ಶ್ಯಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ. ರಾಘವೇಂದ್ರ ರಾವ್, ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಗೀತಾನಾಯಕ್, ಸಮಿತಿಯ ಕೋಶಾಧಿಕಾರಿ ಎಂ. ರಘುನಾಥ ಶೇಟ್ ಅವರು ಸ್ವಾಮೀಜಿಗೆ ಅಭಿವಂದನೆ ಸಲ್ಲಿಸಿದರು.
ಶರವು ಶ್ರೀ ಮಹಾಗಣಪತಿ ಕ್ಷೇತ್ರದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತಿ ಅವರು ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಭಿನಂದನಾ ಭಾಷಣಗೈದರು. ಪ್ರಧಾನ ಕಾರ್ಯದರ್ಶಿ ಡಾ| ಪಿ. ಅನಂತಕೃಷ್ಣ ಭಟ್ ಅವರು ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಡಾ| ಪಾ.ನ. ಮಯ್ಯ ಅಭಿನಂದನಾ ಪತ್ರ ವಾಚಿಸಿದರು. ಮೂಡಬಿದ್ರೆ ಶ್ರೀಪತಿ ಭಟ್ ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಕಟೀಲು ವಂದಿಸಿದರು.
Click this button or press Ctrl+G to toggle between Kannada and English