ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ 2018-20ರ ಬ್ಯಾಚ್ನ ವಿದ್ಯಾರ್ಥಿ ಬಳಗದ ಉದ್ಘಾಟನೆಯು ದಿನಾಂಕ 18-7-2018ರಂದು ಕಾಲೇಜಿನ ಎಲ್.ಎಫ್. ರಸ್ಕಿನ್ಹಾ ಹಾಲ್ನಲ್ಲಿ ಜರುಗಿತು. ಸಂತ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ವಂ. ಫಾ. ಡಯನೀಶಿಯಸ್ ವಾಜ್ ಎಸ್.ಜೆ., ಕಾಲೇಜಿನ ಪ್ರಾಂಶುಪಾಲ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ., ಹಣಕಾಸು ಅಧಿಕಾರಿ, ವಂ. ಫಾ. ಪ್ರದೀಪ್ ಸಿಕ್ವೇರಾ ಎಸ್.ಜೆ. ಸ್ನಾತಕೋತ್ತರ ಬ್ಲಾಕ್ನ ನಿರ್ದೇಶಕರಾದ ಡಾ. ಲವೀನಾ ಲೋಬೊ, ಎಲ್ಸಿಆರ್ಐ ಬ್ಲಾಕ್ನ ನಿರ್ದೇಶಕ ಡಾ. ರಿಚರ್ಡ್ ಗೊನ್ಸಾಲ್ವಿಸ್, ಸ್ನಾತಕೋತ್ತರ ವಿಭಾಗದ ಡೀನ್, ಡಾ. ಪಿ.ಪಿ. ಸಾಜಿಮೊನ್ ಹಾಗೂ ಎಲ್ಲಾ ಪಿಜಿ ವಿಭಾಗ ಮುಖ್ಯಸ್ಥರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರೆಕ್ಟರ್ ವಂ. ಫಾ. ಡಯನೀಶಿಯಸ್ ವಾಜ್ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡುತ್ತಾ, ಸಂತ ಅಲೋಶಿಯಸ್ ಸಂಸ್ಥೆಯು ಒಂದು ಪವಿತ್ರ ಸ್ಥಳವಾಗಿದೆ ಹಾಗೂ ಇಲ್ಲಿ ಕಲಿಯಲು ಬಂದಿರುವ ನೀವೆಲ್ಲರೂ ಈ ಪವಿತ್ರ ಸ್ಥಳವನ್ನು ಪ್ರವೇಶಿಸಿರುತ್ತೀರಿ ಎಂದರು. ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು ಮತ್ತು ಆ ಗುರಿಯನ್ನು ತಲುಪುವ ಕನಸನ್ನು ಅನುಭವ ಮತ್ತು ಪ್ರತಿಫಲನದೊಂದಿಗೆ ಕಂಡುಕೊಳ್ಳಬೇಕು ಎಂದರು. ಅಲ್ಲದೆ ವಿದ್ಯಾರ್ಥಿಗಳು ಆತ್ಮವಿಶ್ವಾಸದ ಜೊತೆ ಮೃದುಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಅದು ನಿಜವಾಗಿಯೂ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಲಿಡಲು ಸಹಕಾರಿಯಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ರೆ. ಡಾ. ಪ್ರವೀಣ್ ಮಾರ್ಟಿಸ್ರವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಇರಿಸಿಕೊಳ್ಳಬೇಕು ಮತ್ತು ಆ ದೃಷ್ಟಿಕೋನವನ್ನು ನನಸಾಗಿಸುವ ಕನಸನ್ನು ಕಾಣಬೇಕು ಎಂದು ಹೇಳಿದರು. ಎಪಿಜೆ ಅಬ್ದುಲ್ ಕಲಾಮ್ರವರು ಯುವಜನರಿಗೆ “ಕನಸು ಕಾಣಿರಿ” ಎಂದು ಹೇಳುತ್ತಿದ್ದುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿದರು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿವಿಧ ಸ್ನಾತಕೋತ್ತರ ಕೋರ್ಸುಗಳಿದ್ದು, ವಿದ್ಯಾರ್ಥಿಗಳು ತಮ್ಮ ಇಚ್ಛಾನುಸಾರ ಕೋರ್ಸುಗಳನ್ನು ಆರಿಸಿಕೊಳ್ಳಬಹುದು ಮತ್ತು ಪಠ್ಯಕ್ರಮದ ಜೊತೆಗೆ ಕೈತುಂಬಾ ಅನುಭವ ಪಡೆದುಕೊಳ್ಳಬಹುದು ಅಲ್ಲದೆ ಈ ತರಹದ ಕಲಿಕೆಯು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಖಂಡಿತವಾಗಿಯೂ ಸಹಾಯವಾಗುತ್ತದೆ ಎಂದರು.
ಡಾ. ಲವೀನಾ ಲೋಬೊರವರು ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಾ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಡಾ. ರಿಚರ್ಡ್ ಗೊನ್ಸಾಲ್ವಿಸ್ ಸ್ನಾತಕೋತ್ತರ ವಿಭಾಗ ಮುಖ್ಯಸ್ಥರನ್ನು ಪರಿಚರಿಯಿಸಿದರು. ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಡಾ. ವಿನೋಲ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸಾಜಿಮೊನ್ ವಂದನಾರ್ಪಣೆಗೈದರು. ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು.
Click this button or press Ctrl+G to toggle between Kannada and English