ಬೆಂಗಳೂರು: ಸಹೋದರನ ಅನಾರೋಗ್ಯದ ಕಾರಣದಿಂದಾಗಿ ದೆಹಲಿಗೆ ತೆರಳಲಿಲ್ಲ. ಇದರ ಹೊರತು ಬೇರೆ ಯಾವುದೇ ಕಾರಣ ಇಲ್ಲ, ಸರಿಯಾಗಿ ಆಹ್ವಾನ ಬಂದಿರಲಿಲ್ಲ ಎನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತುಗಳು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಸ್ಪಷ್ಟೀಕರಣ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು , ನಮ್ಮ ಅಣ್ಣನ ಆರೋಗ್ಯ ಗಂಭೀರವಾಗಿದೆ. ಹೀಗಾಗಿ ನಾನು ದೆಹಲಿಗೆ ಹೋಗಲಿಲ್ಲ. ಕಾವೇರಿ ವಿಚಾರ ಸಭೆ ಸಂಬಂಧ ಸಂಸದರಿಗೆ ಮಾಹಿತಿ ನೀಡಿಲ್ಲ ಅನ್ನೋದು ತಪ್ಪು. ಎಲ್ಲರಿಗೂ ಸರ್ಕಾರದ ವತಿಯಿಂದ ಮಾಹಿತಿ ಹೋಗಿದೆ ಅನ್ನಿಸುತ್ತದೆ ಎಂದರು.
ರಮೇಶ್ ಜಾರಕಿಹೊಳಿ ಶಾಸಕರ ಜೊತೆ ಟೂರ್ಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಹರಕೆ ಹೊತ್ತುಕೊಂಡಿದ್ದಾರೆ ಹೀಗಾಗಿ ಪೂಜೆ ಮಾಡಿಸಲು ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ? ನನ್ನ ಜೊತೆ ನಾಳೆ ಹತ್ತು ಶಾಸಕರು ಬಂದರೆ ಅದು ಬಂಡಾಯ ಅಂತ ಹೇಳುವುದಕ್ಕೆ ಸಾಧ್ಯನಾ? ಕಾಂಗ್ರೆಸ್ ಹೈಕಮಾಂಡ್ ವರದಿ ಕೇಳಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಪಿಸಿಸಿ ಜವಾಬ್ದಾರಿ ದಿನೇಶ್ಗೆ ಬಿಟ್ಟುಕೊಟ್ಟಿದ್ದೇನೆ ಅವರು ನೋಡಿಕೊಳ್ಳುತ್ತಾರೆ ಎಂದರು.
ಇನ್ನು ಸಂಸದರಿಗೆ ಐಫೋನ್ ಗಿಫ್ಟ್ ಕೊಟ್ಟ ವಿಚಾರ ನನಗೆ ಗೊತ್ತಿಲ್ಲ. ಸರ್ಕಾರ ಮಟ್ಟದಿಂದ ಕೊಟ್ಟಿದ್ದಾರೋ, ಶಿವಕುಮಾರ್ ಸ್ವಂತ ಖರ್ಚಿನಲ್ಲಿ ಕೊಟ್ಟಿದ್ದಾರೋ ಗೊತ್ತಿಲ್ಲ.ಆದರೆ ಇಂತಹ ಸಣ್ಣ ವಿಚಾರಗಳನ್ನ ಬಿಟ್ಟು ಕಾವೇರಿ ಅಂತಹ ಗಂಭೀರ ವಿಚಾರಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ. ನಮಗೂ ಒಳ್ಳೆಯದಾಗುತ್ತದೆ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.
ಸೈಕಲ್ ರವಿ ಜೊತೆ ಎಂ.ಬಿ. ಪಾಟೀಲ್ ನಂಟು ಆರೋಪ ಕೇಳಿಬಂದಿದೆ. ಈ ಕೇಸ್ ತನಿಖೆಯ ಹಂತದಲ್ಲಿದೆ. ಆ ರೀತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದರು.
Click this button or press Ctrl+G to toggle between Kannada and English