ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮಾನಾಥ ಕೋಟ್ಯಾನ್ ಅವರು ತುಳು ಅಕಾಡೆಮಿ ಕಛೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ಬಲಿಕ ಮಾತನಾಡಿದ ಅವರು, ತುಳು ಭಾಷೆ, ಸಂಸ್ಕೃತಿಯ ಏಳಿಗೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. 10ನೇ ತರಗತಿ ತನಕ ತುಳು ಭಾಷೆಯ ಪಠ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತೇನೆ. 8 ನೇ ಪರಿಚ್ಛೇದಲ್ಲಿ ತುಳು ಸೇರ್ಪಡೆಗೆ ಅಗತ್ಯ ಪ್ರಯತ್ನ ನಡೆಸುವುದಾಗಿ ಹೇಳಿದರು.
ಡಾ| ಪಾಲ್ತಾಡಿ ಅವರು ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಡಿಪ್ಲೊಮಾ ಇನ್ ತುಳು’ ಕೋರ್ಸು ಆರಂಭಿಸಲು ಅನುಮತಿ ದೊರೆತಿದೆ ಎಂದರು. ನೂತನ ಅಧ್ಯಕ್ಷರ ಅವಧಿಯಲ್ಲಿಯೇ ತುಳು ಭವನ ಉದ್ಘಾಟನೆ ನಡೆಯಲಿ ಎಂದವರು ಹಾರೈಸಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯಸ್ಥ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಖ್ಯ ಅತಿಥಿಯಾಗಿದ್ದರು. ಮಕ್ಕಳಲ್ಲಿ ಮಾತೃಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕು. ತುಳು ಭಾಷೆ, ಸಂಸ್ಕೃತಿಯ ಕಡೆಗೆ ಮಕ್ಕಳು ಮತ್ತು ಯುವ ಜನಾಂಗ ಇನ್ನಷ್ಟು ಒಲವು ತೋರಬೇಕು ಎಂದರು.
ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ಶುಭ ಹಾರೈಸಿದರು.
ಅಕಾಡೆಮಿಯ ನೂತನ ಸದಸ್ಯರಾದ ತುಕಾರಾಮ ಪೂಜಾರಿ, ಜಗನ್ನಾಥ ಶೆಟ್ಟಿ ಬಾಳ, ಪದ್ಮನಾಭ ಎಸ್. ಭಟ್, ಪ್ರಭಾಕರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಬಿ.ವಿ. ಸೂರ್ಯನಾರಾಯಣ, ರಮೇಶ್ ಕಲ್ಮಾಡಿ, ಯಾದವ ಕರ್ಕೇರ, ಮಂಜುಳಾ ಶೆಟ್ಟಿ, ದುರ್ಗಾ ಕುಮಾರ್ ನಾಯರ್‌ಕೆರೆ ಅವರು ಉಪಸ್ಥಿತರಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English