ಕನ್ಯಾಕುಮಾರಿ ಟು ಕಾಶ್ಮೀರ… ಸ್ಕೂಟರ್​ನಲ್ಲೇ ದೇಶ ಸುತ್ತಿದ ಗೆಳೆಯರು!

10:53 AM, Friday, July 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

borderಮಂಗಳೂರು: ಬೈಕ್ನಲ್ಲಿ ಟ್ರೆಕ್ಕಿಂಗ್ ಮಾಡಲು ಗಡುಸಾದ ವಾಹನಗಳನ್ನೇ ಬಯಸುತ್ತಾರೆ. ಗಾಡಿಯ ಸಿಸಿ ಸಾಮರ್ಥ್ಯವನ್ನು ಪರೀಕ್ಷಿಸಿ ಟ್ರೆಕ್ಕಿಂಗ್ ಹೊರಡುತ್ತಾರೆ. ಆದ್ರೆ ಮಂಗಳೂರು ನಿವಾಸಿಗಳಿಬ್ಬರು ಸ್ಕೂಟರ್ ಮೂಲಕ ಕಾಶ್ಮೀರ ತಲುಪಿ ಗಮನ ಸೆಳೆದಿದ್ದಾರೆ.

ಹೌದು.., ಮಂಗಳೂರಿನ ಯುವಕರಿಬ್ಬರು ಹಳೇ ಲ್ಯಾಂಬಿ, ಲ್ಯಾಂಬ್ರೆಟ್ಟಾ ಸ್ಕೂಟರ್ ನಲ್ಲಿ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಅಷ್ಟೆ ಅಲ್ಲ, ಹಳೆಯ ಲ್ಯಾಂಬ್ರೆಟ್ಟಾ ಮೋಡೆಲ್ನ ವಾಹನವೂ ಪರ್ವತವನ್ನು ಏರಬಲ್ಲುದು ಎಂಬುದನ್ನು ಇದೇ ಮೊದಲ ಬಾರಿಗೆ ತೋರಿಸಿದ್ದಾರೆ.

ಗಿರೀಶ್ ಪಿ ವಿ ಮತ್ತು ಸೂರಜ್ ಹೆನ್ರಿ ಈ ಸಾಹಸ ಮಾಡಿದವರು. ಸೈಕಲ್, ಬೈಕ್ಗಳಲ್ಲಿ ಸಮುದ್ರ ಮಟ್ಟದಿಂದ 13,500ಅಡಿ ಎತ್ತರದಲ್ಲಿರುವ ಬೈಕರ್ಸ್ ಪ್ಯಾರಡೈಸ್ ತಲುಪಿದ ಸಾಲಿಗೆ ಲ್ಯಾಂಬ್ರೆಟ್ಟಾವನ್ನೂ ಸೇರಿಸಿದ್ದಾರೆ ಇವರು.

ಇವರಿಬ್ಬರು 10 ಮಂದಿ ತಂಡದ ಜೊತೆಗೆ ಕಳೆದ ವರ್ಷ ಜಮ್ಮುವಿನಿಂದ ಕಾಶ್ಮೀರಕ್ಕೆ ಯೆಜ್ಡಿ ಬೈಕ್ನಲ್ಲಿ ಹೋಗಿದ್ದರು. ಆದರೆ ಈ ಬಾರಿ ಹಳೆ ಸ್ಕೂಟರ್ನಲ್ಲಿ ಹೋಗುವ ಸಾಹಸ ಮಾಡಿ ಅದರಲ್ಲೂ ಯಶಸ್ವಿಯಾಗಿದ್ದಾರೆ.

ಕನ್ಯಾಕುಮಾರಿಯಿಂದ ಗಿರೀಶ್ ಮತ್ತು ಸೂರಜ್ ಜೂ. 26 ರಂದು ಲ್ಯಾಂಬ್ರೆಟ್ಟಾದಲ್ಲಿ ಹೊರಟಿದ್ದರು. ಮಧುರೈ, ಬೆಂಗಳೂರು, ಬಳ್ಳಾರಿ, ಹೈದರಾಬಾದ್, ಝಾನ್ಸಿ, ಆಗ್ರಾ, ದೆಹಲಿ ಎಕ್ಸ್ಪ್ರೆಸ್ ಹೈವೇ ಮೂಲಕ ಜಮ್ಮು, ಶ್ರೀನಗರ, ಸೋನ್ ಮಾರ್ಗವಾಗಿ ದ್ರಾಸ್, ಕಾರ್ಗಿಲ್ ತಲುಪಿ ನಂತರ ಲೇಹ್ನಿಂದ ಜು.16 ರಂದು ಬೈಕರ್ಸ್ ಪ್ಯಾರಡೈಸ್ ಖ್ಯಾತಿಯ ಖರ್ದುಂಗ್ ತಲುಪಿದ್ದಾರೆ. ಸುಮಾರು 21 ದಿನಗಳಲ್ಲಿ ಒಟ್ಟು 4,672 ಕಿ ಮೀ ದೂರವನ್ನು ಸ್ಕೂಟರ್ನಲ್ಲಿ ಕ್ರಮಿಸಿದ್ದಾರೆ. ಈ ಮಧ್ಯೆ ಎರಡು ದಿನಗಳನ್ನು ಡ್ಯಾಕುಮೆಂಟರಿಗೆ ಕಳೆದಿದ್ದಾರೆ.

ನಿತ್ಯ ಬೆಳಗ್ಗೆ 8 ರಿಂದ ರಾತ್ರಿ 8 ರವೆರೆಗೆ 250 ರಿಂದ 400 ಕಿ ಮೀ.ವರೆಗೆ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದರು. ರಾತ್ರಿ ವಸತಿಗೃಹ ಅಥವಾ ವಸತಿಗೃಹ ಸಿಗದೇ ಇರುವಲ್ಲಿ ಕಟ್ಟಡಗಳ ವರಾಂಡದಲ್ಲಿ ವಿಶ್ರಾಂತಿ ಪಡೆದಿದ್ದರು.

ಗಿರೀಶ್ ಅವರಲ್ಲಿ 1982 ಮಾಡೆಲ್ನ ಲ್ಯಾಂಬಿ ಸ್ಕೂಟರ್ ಹಾಗೂ ಸೂರಜ್ ಅವರು 1968 ರ ಲ್ಯಾಂಬ್ರೆಟ್ಟಾ ಸ್ಕೂಟರನ್ನು ಟ್ರೆಕ್ಕಿಂಗ್ಗೆ ಬೇಕಾದಂತೆ ಮಂಗಳೂರಿನಲ್ಲಿ ವಿನ್ಯಾಸಗೊಳಿಸಿದ್ದರು. ದಾರಿ ಮಧ್ಯೆ ತೊಂದರೆಯಾಗದಂತೆ ಅಗತ್ಯ ಉಪಕರಣಗಳನ್ನು ಕೊಂಡೊಯ್ಯಲಾಗಿತ್ತು. ಆದರೆ ಮೂರು ಕಡೆಗಳಲ್ಲಿ ಲ್ಯಾಂಬಿ ಸ್ಕೂಟರ್ ಕೈಕೊಟ್ಟಿತ್ತು.

ಮಂಗಳೂರಿನಲ್ಲಿ ಸಿದ್ಧಪಡಿಸಿದ್ದ ಈ ಎರಡೂ ಸ್ಕೂಟರ್ಗಳನ್ನು ಕನ್ಯಾಕುಮಾರಿಗೆ ರೈಲಿನಲ್ಲಿ ಸಾಗಿಸಿ ಅಲ್ಲಿಂದ ಸ್ಕೂಟರ್ನಲ್ಲಿ ಸಂಚಾರ ಆರಂಭಿಸಿದ್ದರು. ಟ್ರೆಕ್ಕಿಂಗ್ ಪೂರೈಸಿದ ಬಳಿಕ ಸ್ಕೂಟರನ್ನು ಕಾಶ್ಮೀರದಿಂದ ಮಂಗಳೂರಿಗೆ ಟ್ರಕ್ನಲ್ಲಿ ತುಂಬಿಸಲಾಗಿದೆ.

ಗಿರೀಶ್ ಅವರು ಮಂಗಳೂರಿನ ಹೊಸಬೆಟ್ಟುವಿನಲ್ಲಿ ಹಳೆಯ ವಾಹನಗಳ ಮ್ಯೂಸಿಯಂನ್ನು ಹೊಂದಿದ್ದಾರೆ. ಹಳೆಯ ದ್ವಿಚಕ್ರ, ಆಟೋ ರಿಕ್ಷಾ, ನಾಲ್ಕು ಚಕ್ರದ ವಾಹನಗಳು ಸೇರಿ 65 ರಷ್ಟು ವಾಹನಗಳು ಅವರ ಮ್ಯೂಸಿಯಂನಲ್ಲಿವೆ. ಸೂರಜ್ ಅವರು ಕ್ಯಾಟರಿಂಗ್ ನಡೆಸುತ್ತಿದ್ದು ಮೆಕ್ಯಾನಿಕ್ ಜ್ಞಾನ ಹೊಂದಿದ್ದಾರೆ. ಒಟ್ಟಿನಲ್ಲಿ ಈ ಗೆಳೆಯರಿಬ್ಬರು ಸ್ಕೂಟರ್ ನಲ್ಲಿ ಕಾಶ್ಮೀರ ಸುತ್ತಿ ಸಾಧನೆ ಮಾಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English