ಬೆಂಗಳೂರು: ಜನ ನಮ್ಮ ವಿರುದ್ಧ ತಿರುಗಿ ಬಿದ್ದಿಲ್ಲ. ನಮ್ಮನ್ನು ಒಪ್ಪಿಕೊಂಡಿದ್ದಾರೆ. ಆದರೂ ಪ್ರಜಾಪ್ರಭುತ್ವದಲ್ಲಿ ಸಂಖ್ಯೆ ಮುಖ್ಯ. ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಲೋಕಸಭೆಯಲ್ಲಿಯೂ ಉತ್ತಮ ಕೆಲಸ ಮಾಡಿ ಹೆಚ್ಚು ಸ್ಥಾನ ಗೆಲ್ಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪದಾಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಕಾಂಗ್ರೆಸ್ಗೆ ಸವಾಲಾಗಿದೆ. ಡಿಸೆಂಬರ್ನಲ್ಲಿ ಲೋಕಸಭೆಗೆ ಚುನಾವಣೆ ಬರಬಹುದು. ಬಹುತೇಕ ಅಕ್ಟೋಬರ್ ಮೊದಲ ವಾರದಲ್ಲಿ ಅಧಿಸೂಚನೆಯಾಗಲಿದೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಷ್ಟು ಸ್ಥಾನ ಗೆಲ್ಲಲಾಗಲಿಲ್ಲ. 5 ವರ್ಷ ಉತ್ತಮ ಸರ್ಕಾರ ನೀಡಿದ್ದೆವು. ಆದರೂ ನಮ್ಮ ನಿರೀಕ್ಷೆ ಈಡೇರಲಿಲ್ಲ. ಜನ ಸರ್ಕಾರದ ಸಾಧನೆ ನೋಡದೆ ಭಾವನಾತ್ಮಕವಾಗಿ, ಜಾತಿ, ಧರ್ಮ ನೋಡಿ ಮತ ಹಾಕಿದ್ದಾರೆ. ಹಿಂದಿಗಿಂತ ಹೆಚ್ಚು ಜನ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದರು.
ನಮ್ಮ ಉದ್ದೇಶ, ಗುರಿಯನ್ನು ಕಾರ್ಯಕರ್ತರಿಗೆ ತಿಳಿಸಿ ಚೈತನ್ಯ ತುಂಬಬೇಕಿದೆ. ಕಳೆದ ಚುನಾವಣೆಯಲ್ಲಿ ಎಲ್ಲರು ಶಕ್ತಿ ಮೀರಿ ಕೆಲಸ ಮಾಡಿದ್ದೀರಾ. ಮತ್ತೆ ಅದೇ ಬದ್ಧತೆಯಲ್ಲಿ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬರಿಗೂ ಜವಾಬ್ದಾರಿ ಹಂಚಿಕೆಯಾಗಲಿದೆ. 13 ಪಾಲಿಕೆ, 100 ನಗರಸಭೆ ಚುನಾವಣೆಗೆ ಆಗಸ್ಟ್ನಲ್ಲಿ ಅಧಿಸೂಚನೆ ಜಾರಿಯಾಗಲಿದೆ. ನಮ್ಮ ಸಂಘಟನೆ ಬಲವಾಗಿರಬೇಕು. ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆಕ್ಟಿವ್ ಆಗಿರಬೇಕು . ಕಾರ್ಯದರ್ಶಿಗಳು ಜಿಲ್ಲೆಗೆ ಹೋಗಿ ಸಭೆ ಮಾಡಿ. ಎಲ್ಲಿ ಬ್ಲಾಕ್ ಅಧ್ಯಕ್ಷರು ಕೆಲಸ ಮಾಡುತ್ತಿಲ್ಲ ಅವರನ್ನು ಬದಲಾವಣೆ ಮಾಡಿ. ಆಗಸ್ಟ್ನಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಬದಲಾವಣೆಯಾಗಬೇಕು. ಯಾವುದೇ ಕಾರಣ ನೀಡುವಂತಿಲ್ಲ. ಸಂಘಟನೆ ಮಾಡುವ ಶಕ್ತಿ ಮತ್ತು ಉತ್ಸಾಹ ಇರೋರನ್ನು ಹುಡುಕಿ ಮಾಡಿ ಎಂದರು.
ಜಿಲ್ಲಾ ಮಟ್ಟದ ಸಮಾವೇಶ ಮಾಡಿ ಉತ್ಸಾಹ ತುಂಬಿ ಸಜ್ಜುಗೊಳಿಸಬೇಕು. ಸಂಘಟನೆ ತಯಾರಾಗಬೇಕು. ಮುಂಚೂಣಿ ಘಟಕಗಳು ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ನೇಮಿಸಬೇಕು. ಕ್ವಿಟ್ ಇಂಡಿಯಾ ಆಚರಣೆ ಜೊತೆ ಬಹಳಷ್ಟು ವಿಷಯಗಳನ್ನು ಜನರಿಗೆ ತಿಳಿಸಬೇಕು ಎಂದರು.
Click this button or press Ctrl+G to toggle between Kannada and English