ಮೂಡುಬಿದಿರೆ: ಪತ್ರಿಕೋದ್ಯಮದ ಅಸ್ಮಿತೆ ಮುದ್ರಣಾ ಮಾಧ್ಯಮದಲ್ಲಿ ಅಡಗಿದ್ದು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ಮುದ್ರಣ ಮಾಧ್ಯಮದಲ್ಲಿ ಪ್ರಾರಂಭಿಸಿದರೆ, ಮಾಧ್ಯಮ ಲೋಕದಲ್ಲಿ ಉನ್ನತ ಸ್ಥಾನವನ್ನು ಏರಬಹುದು ಎಂದು ಹಿರಿಯ ಪತ್ರಕರ್ತ ಯು.ಕೆ. ಕುಮಾರನಾಥ್ ತಿಳಿಸಿದರು.
ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಇಂದು ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಿಟ್ಟತನ ಹಾಗೂ ನೇರನುಡಿ ಪತ್ರಕರ್ತರಿಗೆ ಇರಬೇಕಾದ ಪ್ರಮುಖ ಗುಣಗಳಾಗಿದ್ದು, ಹೊಸತನದ ಆಳವಡಿಕೆ ಪ್ರತಿ ಹಂತದಲ್ಲೂ ಅಗತ್ಯವಿದೆ ಎಂದು ಹೇಳಿದರು. ನವಮಾಧ್ಯಮಗಳ ಅನ್ವೇಷಣೆಯಿಂದ ಪತ್ರಿಕೋದ್ಯಮ ಎಂಬ ಕ್ಷೇತ್ರ ವಿಸ್ತಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾಧ್ಯಮಗಳಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಿದ್ದು, ಆ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳಸಿಕೊಳ್ಳುವ ಅಗತ್ಯವಿದೆ. ನಿರಂತರ ಓದು, ವಿಷಯ ಜ್ಞಾನ, ಸೃಜನಾಶೀಲತೆ, ಪಾರದರ್ಶಕತೆ ಮಾತ್ರ ಉತ್ತಮ ಪತ್ರಕರ್ತರನ್ನು ಸೃಷ್ಟಿಸಬಲ್ಲದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ ಆಳ್ವ ‘ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯವಾಗಿದ್ದು, ಪತ್ರಕರ್ತರು ರಚನಾತ್ಮಕ ಬರವಣಿಗೆಯ ಮೂಲಕ ಸುಸ್ಥಿರ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ಹೇಳಿದರು.
ಮಾಧ್ಯಮ ಜನರ ಮನಸ್ಸನ್ನು ಕಟ್ಟುವ ಕೆಲಸಮಾಡಬೇಕೇ ಹೊರತು, ಮನಸ್ಸನ್ನು ಒಡೆಯುವ, ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸುವ ಕೆಲಸದಲ್ಲಿ ತೊಡಗಬಾರದು ಎಂದರು.
Click this button or press Ctrl+G to toggle between Kannada and English