ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ: ಸಚಿವೆ ಜಯಮಾಲಾ

12:18 PM, Wednesday, July 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

jayamalaಮಂಗಳೂರು: ಅಂಗನವಾಡಿ ವ್ಯವಸ್ಥೆ ಪಾರದರ್ಶಕವಾಗಿಸಲು ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ ಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹೇಳಿದರು. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿಗಳ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಇಲಾಖೆಯ ಕೆಲಸಗಳಿಗೆ ಬಿಟ್ಟು ಅನ್ಯ ಕೆಲಸಗಳಿಗೆ ಬಳಸುವಂತಿಲ್ಲ. ಅಂಗನವಾಡಿಯಲ್ಲಿ ಮಕ್ಕಳಿಗೆ ಒಳ್ಳೆಯ ಪರಿಸರ ಸೃಷ್ಟಿ ಮಾಡಬೇಕು. ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರಬೇಕು. ಸೊಳ್ಳೆ ಕಾಟ ಇದ್ದರೆ ಕೀಟನಾಶಕ ಸಿಂಪಡನೆ ಮಾಡಿ. ಅಲ್ಲದೆ ಸೊಳ್ಳೆಪರದೆ ಬಳಸಿ ಎಂದು ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಗನವಾಡಿ ಸಹಾಯಕಿಯರ ಹುದ್ದೆಗೆ ಆನ್‌ ಲೈನ್‌ ನಲ್ಲಿ ಅರ್ಜಿ ಆಹ್ವಾನಿಸುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಸ್ಥಳೀಯವಾಗಿ ಕೆಲಸದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ ಎಂದರು.

ಮಾತೃಪೂರ್ಣ ಯೋಜನೆ ಕುರಿತಾಗಿ ಪ್ರತಿಕ್ರಿಯಿಸಿದ ಸಚಿವೆ, ಗರ್ಭಿಣಿ ಹೊಟ್ಟೆಯಲ್ಲಿ ಮಗುವಿನ ಉತ್ತಮ ಬೆಳವಣಿಗೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇದನ್ನು ತಿಳಿಹೇಳಲು ಅಧಿಕಾರಿಗಳು ವಿಫಲರಾಗಿದ್ದಾರೆ. ಆಹಾರವನ್ನು ಗರ್ಭಿಣಿ, ಬಾಣಂತಿಯರ ಮನೆಗೆ ಕಳುಹಿಸಿ ಎಂದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಆರೋಗ್ಯ ಸಮಿತಿ ಉಪಾಧ್ಯಕ್ಷೆ ಅನಿತಾ ಶೆಟ್ಟಿ ಇದ್ದರು.

ಮಹಿಳಾ ಸಹಾಯವಾಣಿ ಸಂಖ್ಯೆ 181. BSNLನ ಸಹಾಯವಾಣಿ ಸಂಖ್ಯೆಯೂ ಇದೇ ಆಗಿದೆ. ಮಹಿಳಾ ಸಹಾಯವಾಣಿಗೆ ಬರುವ ಹೆಚ್ಚಿನ ಕರೆಗಳು BSNLಗೆ ಸಂಬಂಧಿಸಿದ್ದು. ಇದರಿಂದ ತೊಂದರೆಯಾಗುತ್ತಿದೆ ಎಂದು ಸಮಾಲೋಚಕಿ ಹರ್ಷಿತಾ ಗಮನಕ್ಕೆ ತಂದರು.

ಪುತ್ತೂರಿನಲ್ಲಿ ಮಕ್ಕಳ ದತ್ತು ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳಿಗೆ ಆರೋಗ್ಯ ಸಮಸ್ಯೆ ಬಂದರೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಬೇಕು. ಈ ಕಾರಣಕ್ಕಾಗಿ ದತ್ತು ಇಲಾಖೆ  ಮಂಗಳೂರಿಗೆ ಸ್ಥಳಾಂ ತರಿಸಿ ವೆನ್ಲಾಕ್‌ ಜತೆ ಒಪ್ಪಂದ ಮಾಡಿ ಚಿಕಿತ್ಸೆ ನೀಡಿ ಎಂದು ಸುಂದರ ಪೂಜಾರಿ ಅವರಿಗೆ ಸಚಿವೆ ಸೂಚಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English