ಎಟಿಎಂ ಹಣ ಎಗರಿಸಿದ ಚಾಲಕಿ ಕಳ್ಳರ ತಂಡ, ಗಂಟೆಯೊಳಗೆ ಹಿಡಿದ ಪೊಲೀಸರು

1:04 PM, Friday, December 16th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

ATM Thieves

ಮಂಗಳೂರು : ನಗರದ ಹಂಪನಕಟ್ಟೆಯ ವಿಲಾಗ್ರೀಸ್ ಬಳಿ ಕೆಎಂಸಿ ಡೆಂಟಲ್‌ ಕಾಲೇಜು ಕಟ್ಟಡದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಟಿಎಂ ಯಂತ್ರಕ್ಕೆ ನಗದು ತುಂಬಿಸಲು ಬಂದಿದ್ದ ಪ್ರೋ ಇಂಟರ್ಯಾಕ್ಟಿವ್‌ ಸರ್ವೀಸಸ್‌ನ ಆಮ್ನಿ ವಾಹನದಿಂದ ಹಣವಿದ್ದ ಪೆಟ್ಟಿಗೆಯನ್ನು ಗುರುವಾರ ಮಧ್ಯಾಹ್ನ ಸುಮಾರು 12.15ರ ವೇಳೆಗೆ
ಕಳ್ಳರು ಅಪಹರಿಸಿ ಪರಾರಿಯಾಗಿದ್ದಾರೆ.

ಚಾಲಕಿ ಕಳ್ಳರ ತಂಡ ಎಟಿಎಂ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಚಾಲಕ ಮಾತ್ರ ಇರುವುದನ್ನು ಗಮನಿಸಿ ಅಲ್ಲಿಗೆ ಬಂದ ತಂಡದ ವ್ಯಕ್ತಿಯೊಬ್ಬ ಹತ್ತು ರೂ.ಗಳ ಸುಮಾರು 25 ನೋಟುಗಳನ್ನು ಕಾರಿನ ಪಕ್ಕದಲ್ಲಿ ನೆಲಕ್ಕೆ ಎಸೆದು ‘ನಿಮ್ಮ ಹಣ ಬಿದ್ದಿದೆ, ನೋಡಿ’ ಎಂದು ಚಾಲಕನ ಬಳಿ ಹೇಳಿದ. ಆಗ ಚಾಲಕ ಕಾರಿನಿಂದ ಇಳಿದು ಕೆಳಗೆ ಬಿದ್ದಿರುವ ನೋಟುಗಳು ತಮ್ಮದೇ ಆಗಿರಬಹುದು ಎಂದು ಒಂದೊಂದೇ ನೋಟುಗಳನ್ನು ಹೆಕ್ಕ ತೊಡಗಿದ. ವಾಹನದಲ್ಲಿದ್ದ ಇಬ್ಬರು ಹಣವನ್ನು ತುಂಬಿಸಲು ಗನ್‌ಮ್ಯಾನ್‌ ಬೆಂಗಾವಲಿನಲ್ಲಿ ಎಟಿಎಂ ಒಳಗೆ ತೆರಳಿದ್ದರು. ಅಷ್ಟರಲ್ಲಿ ಅಲ್ಲಿದ್ದ ಅಪರಿಚಿತ ವ್ಯಕ್ತಿ ಆಮ್ನಿ ವಾಹನದ ಹಿಂಬದಿಯ ಬಾಗಿಲಿನ ಗಾಜು ಪುಡಿಗೈದು ಒಳಗಿದ್ದ ಹಣದ ಪೆಟ್ಟಿಗೆಯನ್ನು ಎತ್ತಿ ಅಪಹರಿಸಿಕೊಂಡು ಓಡಿ ಹೋದ. ಆತನ ಜತೆಗೆ ಬೇರೆ ಎಷ್ಟು ಮಂದಿ ಇದ್ದರು ಎಂದು ತತ್‌ಕ್ಷಣಕ್ಕೆ ಗಮನಿಸಲು ಸಾಧ್ಯವಾಗಿಲ್ಲ. ಆಮ್ನಿ ವಾಹನದ ಚಾಲನು ಕೆಳಗೆ ಬಿದ್ದುಕೊಂಡಿದ್ದ ನೋಟುಗಳನ್ನು ಹೆಕ್ಕಿ ಬರುವಷ್ಟರಲ್ಲಿ ಕಳ್ಳರು ತಮ್ಮ ಕೃತ್ಯವನ್ನು ಸಲೀಸಾಗಿ ಪೂರೈಸಿ ಅಲ್ಲಿಂದ ಕಾಲ್ಕಿತ್ತಿದ್ದರು.

ATM Thieves

ಒಟ್ಟು 32 ಲಕ್ಷ ರೂ, ಹಣ ಇದ್ದು, ಈ ಪೈಕಿ 25 ಲಕ್ಷ ರೂ. ಮಾತ್ರ ವಾಹನದ ಒಳಗಿದ್ದ ಪೆಟ್ಟಿಗೆಯಲ್ಲಿತ್ತು. ಉಳಿದ ಹಣ ಇನ್ನೊಂದು ಸೂಟ್‌ಕೇಸ್‌ನಲ್ಲಿ ಎಟಿಎಂನಲ್ಲಿ ತುಂಬಿಸುವುದಕ್ಕಾಗಿ ಕೊಂಡು ಹೋಗಿದ್ದವರ ಬಳಿ ಇತ್ತು.

ತತ್‌ಕ್ಷಣ ಪೊಲೀಸ್‌ ಕಂಟ್ರೊಲ್‌ ರೂಂಗೆ ಮಾಹಿತಿ ರವಾನೆಯಾಗಿತ್ತು. ಕಾರ್ಯಾಚರಣೆಗೆ ಇಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದೇ ಅಲ್ಲದೆ ಎಲ್ಲಾ ಠಾಣೆಗಳಿಗೆ ಮಾಹಿತಿ ರವಾನಿಸಿದರು. ಪಿಸಿಆರ್‌ ವಾಹನ, ಬೈಕ್‌ ಮತ್ತು ಜೀಪ್‌ಗ್ಳಲ್ಲಿ ಓಡಾಡಿದರು. ಮಂಗಳೂರು ನಗರವನ್ನು ರೌಂಡ್‌ ಅಪ್‌ ಮಾಡಿದರು. ಹಣ ಅಪಹರಿಸಿದ ಮಂದಿ ಯಾವ ಕಡೆಗೆ ಹೋಗಿದ್ದಾರೆ ಎಂದು ಖಚಿತವಾಗಿ ತಿಳಿಯದೆ ಇದ್ದ ಕಾರಣ ಅಲ್ಲಿಲ್ಲಿ ನಾಕಾಬಂದಿ ವ್ಯವಸ್ಥೆ ಮಾಡಲಾಯಿತು.

ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ಸೋಮಯ್ಯ, ಸಿಬಂದಿ ಶಿವ, ಮೋಹನ್‌, ರಾಜೇಶ್‌, ಉದಯ ಅವರನ್ನೊಳಗೊಂಡ ತಂಡ ರಾಷ್ಟ್ರೀಯ ಹೆದ್ದಾರಿ 75ರ ಕಣ್ಣೂರು ಬಳಿ ಪುತ್ತೂರು ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ತಡೆದು ನಿಲ್ಲಿದಾಗ ಒಬ್ಬ ವ್ಯಕ್ತಿ ಬಸ್ಸಿನಿಂದ ಇಳಿದು ಓಡಲಾರಂಭಿಸಿದ. ಸಂಶಯಗೊಂಡ ಪೊಲೀಸರು ಆತನನ್ನು ಬೆನ್ನಟ್ಟಿದರು. ಕೆಲವು ಪೊಲೀಸರು ಬಸ್ಸಿನ ಒಳಗೆ ತಪಾಸಣೆ ನಡೆಸಿದರು. ಬಸ್ಸಿನಲ್ಲಿ ಸುಮಾರು 2 ಅಡಿ ಎತ್ತರದ ಮತ್ತು 1 ಅಡಿ ಅಗಲದ ಕಬ್ಬಿಣದ ಪೆಟ್ಟಿಗೆ ಪತ್ತೆಯಾಗಿದ್ದು, ಅದನ್ನು ಹಿಡಿದುಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಓಡಲೆತ್ನಿಸಿದ ಇನ್ನಿಬ್ಬರನ್ನು ಮತ್ತು ಮೊದಲೇ ಬಸ್ಸಿನಿಂದ ಇಳಿದು ಓಡುತ್ತಿದ್ದವನನ್ನು ಊರಿನ ಜನರ ಸಹಕಾರದಿಂದ ಪೊಲೀಸರು ಬಂಧಿಸಿದರು.

ಆರೋಪಿಗಳು ಪೆಟ್ಟಿಗೆಯ ಬೀಗ ಒಡೆದು ಮುರಿಯಲು ಬಹಳಷ್ಟು ಪ್ರಯತ್ನ ನಡೆಸಿದ್ದಾರೆ. ಕಲ್ಲು ಅಥವಾ ಆಯುಧದಿಂದ ಹೊಡೆದ ಗುರುತುಗಳು ಬೀಗದ ಮೇಲೆ ಪತ್ತೆಯಾಗಿವೆ. ಆದರೆ ಬೀಗ ಒಡೆಯಲು ಸಾಧ್ಯವಾಗಿಲ್ಲ.

ATM Thieves Press Meet

ಈಗ 4 ಮಂದಿಯನ್ನು ಬಂಧಿಸಲಾಗಿದೆ. ಅವರು ತಮಿಳನಾಡಿನವರು ಎಂದು ತಿಳಿದು ಬಂದಿದೆ. ಅವರ ವಿಳಾಸ ಮತ್ತು ಇತರ ವಿವರಗಳು ತನಿಖೆಯ ಬಳಿಕ ಬೆಳಕಿಗೆ ಬರಬೇಕಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪುನಃ ಪೊಲೀಸ್‌ ಕಸ್ಟಡಿಗೆ ಪಡೆಯಲಾಗುವುದು. ಈ ಕಳ್ಳರ ಜಾಲದ ಇನ್ನೂ ಇಬ್ಬರು ಇರ ಬೇಕೆಂದು ಶಂಕಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್‌ ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 12.15ರ ವೇಳೆಗೆ ಹಣ ಅಪಹರಣ ಸಂಭವಿಸಿದೆ. 1 ಗಂಟೆ ವೇಳೆಗೆ ಕಣ್ಣೂರಿನಲ್ಲಿ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಇಂತಹ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರು (ಡಿಜಿಪಿ) 20,000 ರೂ. ಬಹುಮಾನ ಘೋಷಿಸಿದ್ದಾರೆ. ಮಂಗಳೂರು ಪೊಲೀಸ್‌ ಅಯುಕ್ತರ ನೆಲೆಯಲ್ಲಿ ತಾನು 10,000 ರೂ. ನಗದು ಬಹುಮಾನ ನೀಡುತ್ತೇನೆ ಎಂದು ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ರಘುರಾಮ ಶೆಟ್ಟಿ ಅವರು ಪೊಲೀಸರ ದಕ್ಷತೆಯ ಕಾರ್ಯಾಚರಣೆಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಮೇಲಧಿಕಾರಿಗಳ ಅನುಮೋದನೆ ಪಡೆದು ಕಾರ್ಯಾಚರಣೆ ನಡೆಸಿದ ಸಿಬಂದಿಗೆ ಸೂಕ್ತ ಬಹುಮಾನ ನೀಡುವುದಾಗಿ ಅವರು ತಿಳಿಸಿದರು.

‘ಬ್ಯಾಂಕಿನವರು ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಬೇಕು; ಇಂತಹ ಘಟನೆ ಮರುಕಳಿಸಬಾರದು. ಅವರು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸ ಬೇಕು’ ಎಂದು ಹೇಳಿದ ಸೀಮಂತ್‌ ಕುಮಾರ್‌ ಸಿಂಗ್‌ ಬ್ಯಾಂಕಿನವರು ವಹಿಸ ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಲ್ಲಾ ಬ್ಯಾಂಕುಗಳ ಅಧಿಕಾರಿಗಳನ್ನು ಕರೆಸಿ ಸಮಾಲೋಚನೆ ನಡೆಸಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದರು.

ಕಣ್ಣೂರಿನಲ್ಲಿ ಆರೋಪಿಗಳನ್ನು ಪತ್ತೆಮಾಡಿ ಬಂಧಿಸುವಲ್ಲಿ ಸಹಕರಿಸಿದ ಸ್ಥಳೀಯ ಜನರನ್ನು ಸಮ್ಮಾನಿಸಲಾಗುವುದು ಎಂದು ಅಯುಕ್ತರು ತಿಳಿಸಿದರು.

ಪೊಲೀಸ್‌ ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರು ತನ್ನ ವಾಹನದಲ್ಲಿ ಮಧ್ಯಾಹ್ನ ಕಣ್ಣೂರು ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಪಂಪ್‌ವೆಲ್‌ನಲ್ಲಿ 12.40ರ ವೇಳೆಗೆ ತನ್ನ ವಾಹನಕ್ಕೆ ಮುಂದೆ ಹೋಗಲು ದಾರಿ ಬಿಡಲಿಲ್ಲ ಎಂದು ಅಡ್ಯಾರ್‌ ಕಡೆಗೆ ಹೋಗುತ್ತಿದ್ದ ಖಾಸಗಿ ಸಿಟಿ ಬಸ್ಸಿನ ಚಾಲಕ ಮಧು ಅವರ ಮೇಲೆ ಅಯುಕ್ತರ ಜತೆಗಿದ್ದ ಪೊಲೀಸ್‌ ಅಧಿಕಾರಿ ಒಬ್ಬರು ಹಲ್ಲೆ ನಡೆಸಿದರು ಎಂದು ಆರೋಪಿಸಿ ಬಸ್‌ ಸಿಬಂದಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಪಂಪ್‌ವೆಲ್‌ ವೃತ್ತದಲ್ಲಿ ರಸ್ತೆ ತಡೆ ಮಾಡಿದರು. ಇದರಿಂದಾಗಿ ಸುಮಾರು ಒಂದುವರೆ ಗಂಟೆ ಕಾಲ ಈ ಪ್ರದೇಶದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ಪೊಲೀಸ್‌ ಅಯುಕ್ತರು ಸ್ಥಳಕ್ಕೆ ಬರಬೇಕು ಮತ್ತು ಹಲ್ಲೆ ಎಸಗಿದರೆನ್ನಲಾದ ಪೊಲೀಸರು ಕ್ಷಮೆ ಯಾಚಿಸಬೇಕು ಮತ್ತು ಹಲ್ಲೆಗೊಳಗಾದ ಬಸ್‌ ಸಿಬಂದಿಯನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟುಹಿಡಿದು ಕುಳಿತರು. ಕೊನೆಗೂ ಅಯುಕ್ತರು ಸ್ಥಳಕ್ಕೆ ತೆರಳಿ ಬಸ್‌ ಸಿಬಂದಿ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸಿದರು. ಈ ನಡುವೆ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಪೊಲೀಸರು ಲಾಠಿ ಚಾರ್ಚ್‌ ಮಾಡಿ ಜನರನ್ನು ಚದುರಿಸಿದರು.

ವಾಹನ ಸಂಚಾರ ಅಸ್ತವ್ಯಸ್ತಗೊಂಡ ಕಾರಣ ಮಧ್ಯಾಹ್ನದ ವೇಳೆ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಯಿತು. ಪಂಪ್‌ವೆಲ್‌ನಿಂದ ಕಂಕನಾಡಿ- ಬೆಂದೂರ್‌ವೆಲ್‌, ನಂತೂರು, ತೊಕ್ಕೋಟು, ಪಡೀಲ್‌ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸಮಸ್ಯೆ ಸೌಹಾರ್ದಯತವಾಗಿ ಬಗೆಹರಿದಿದೆ. ಬಸ್‌ ಚಾಲಕನನ್ನು ಪೊಲೀಸರು ಬಿಡಗಡೆ ಮಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಬಸ್‌ ಬಂದ್‌ನಂತಹ ಯಾವುದೇ ಚಳವಳಿ ನಡೆಸುವ ಉದ್ದೇಶವಿಲ್ಲ ಎಂದು ಕಾರ್ಮಿಕ ಪರಿಷತ್‌ನ ಬಸ್‌ ನೌಕರರ ಸಂಘದ ಅಧ್ಯಕ್ಷ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.
ಕೃಪೆ : ಉದಯವಾಣಿ ಪತ್ರಿಕೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English