ಬಂಟ್ವಾಳ: ಸೊತ್ತುಗಳ ಕಳವು ಆರೋಪ ಮೇರೆಗೆ ಆರೋಪಿಯೋರ್ವನನ್ನು ಬಂಟ್ವಾಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಂಗಳೂರು ತಾಲೂಕಿನ ಕಲ್ಲಮುಂಡಕುರ್ ಗ್ರಾಮದ ನಿಡ್ಡೋಡಿ ನಿವಾಸಿ ಉಮಾನಾಥ ಪ್ರಭು (51) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು, ಆತನ ಬಳಿಯಿಂದ ಸುಮಾರು 4 ಲಕ್ಷ ಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು 52 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ: ಬಂಟ್ವಾಳ ರೈಲ್ವೆ ನಿಲ್ದಾಣದ ದ್ವಾರದ ಬಳಿ ವ್ಯಕ್ತಿಯೋರ್ವ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಸಂಶಯವಾಗಿ ತಿರುಗುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಪೊಲೀಸುರು ವ್ಯಕ್ತಿಯಿದ್ದ ಕಡೆ ತಲುಪಿದಾಗ, ಗಲಿಗೊಂಡ ವ್ಯಕ್ತಿ ಮರೆಮಾಚಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತದನಂತರ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹೆಸರು ವಿಳಾಸದ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರ ನೀಡದೆ ಇದ್ದು, ಈತನ ಕೈಯಲ್ಲಿ ಇದ್ದ ಬ್ಯಾಗ್‌ನ್ನು ತೆರೆದು ಪರಿಶೀಲಿಸಿದಾಗ ಬೆಳ್ಳಿ ಹಾಗೂ ಚಿನ್ನ ಆಭರಣಗಳು ಹಾಗೂ ರೂ. 52,390 ನಗದು ಹಣ ಕಂಡು ಬಂದಿದೆ. ಅಲ್ಲದೆ, ಇವುಗಳ ಬಗ್ಗೆ ಯಾವುದೇ ಸಮರ್ಪಕವಾದ ದಾಖಲೆಯನ್ನು ನೀಡದ ಕಾರಣ ಆತನನ್ನು ಪೊಲೀಸರು ಬಂಧಿಸಿದ್ದರು.
ತದನಂತರ ವಿಚಾರಿಸಿದಾಗ ಆರೋಪಿತನು ಭಟ್ಕಳ ತಾಲೂಕು ಶಿರಾಲಿ ಎಂಬ ಮನೆಯಿಂದ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಗಾಮ್ರಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English