ಸಾರಿಗೆ ಸಂಸ್ಥೆಗಳಿಗೆ ಹೊಸ ರೀತಿಯ ಕಾಯಕಲ್ಪ: ಸಚಿವ ಡಿ ಸಿ ತಮ್ಮಣ್ಣ

1:08 PM, Monday, July 30th, 2018
Share
1 Star2 Stars3 Stars4 Stars5 Stars
(No Ratings Yet)
Loading...

dc-thimannaಹುಬ್ಬಳ್ಳಿ: ನೂತನ ಸರ್ಕಾರದಲ್ಲಿ ಸಾರಿಗೆ ಸಂಸ್ಥೆಗಳಿಗೆ ಹೊಸ ರೀತಿಯ ಕಾಯಕಲ್ಪಗಳನ್ನು ಕಲ್ಪಿಸಲಾಗುತ್ತಿದೆ. ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಆಸ್ತಿಗಳ ಸರ್ವೇ ಹಾಗೂ ಲೆಕ್ಕ ಪರಿಶೋಧನೆಯನ್ನು ಬೇರೊಂದು ಸಂಸ್ಥೆಗಳಿಂದ ನಡೆಸಲಾಗುತ್ತಿದ್ದು, ಪ್ರತಿ ತಿಂಗಳು ವರದಿಯನ್ನು ಅವಲೋಕಿಸಲಾಗುವುದು. ವೆಚ್ಚ ಹಾಗೂ ಸೋರಿಕೆಯನ್ನು ತಡೆದು ಎರಡು ವರ್ಷಗಳಲ್ಲಿ ಸಾರಿಗೆ ಸಂಸ್ಥೆಯನ್ನು ಲಾಭದ ಹಾದಿಗೆ ತರಲಾಗುವುದು ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಹೇಳಿದರು.

ಅವರು ಭಾನುವಾರ ನಗರದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಕೆ.ಎಸ್.ಆರ್.ಟಿ.ಸಿ. ಆಫೀಸರ್ಸ್ ವೆಲ್ಫೇರ್ ಅಸೋಶಿಯೇಶನ್ ಅನ್ನು ಉದ್ಘಾಟಸಿ ಮಾತನಾಡಿ, 1.20 ಲಕ್ಷ ನೌಕರರನ್ನು ಒಳಗೊಂಡಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದೇಶದಲ್ಲೇ ಅತ್ಯತ್ತಮ ಸೇವೆಯನ್ನು ನಾಗರಿಕರಿಗೆ ಒದಗಿಸುತ್ತಿದೆ. ಸಂಸ್ಥೆಗೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿರುವುದು ಇದಕ್ಕೆ ಉದಾಹರಣೆಯಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಒಟ್ಟು 650 ಕೋಟಿ ರೂ.ಗಳ ನಷ್ಟದಲ್ಲಿ ಇದೆ. ಸರ್ಕಾರ ಸಾರಿಗೆ ಸಂಸ್ಥೆಗಳನ್ನು ಕೇವಲ ಲಾಭದ ಉದ್ದೇಶದಿಂದ ನಡೆಸುತ್ತಿಲ್ಲ. ಸೇವೆ ಗುರಿಯನ್ನು ಹೊಂದಿ ಸಂಸ್ಥೆಗಳನ್ನು ನಿರ್ವಹಣೆ ಮಾಡುತ್ತಿದೆ ಎಂದು ಹೇಳಿದರು.

dc-thimanna-2ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ 25 ಸ್ಪೆಷಲ್ ಸ್ಲೀಪರ್ ಬಸ್ ಗಳನ್ನು ನೀಡಲಾಗಿದ್ದು, ಪ್ರಸಕ್ತ ವರ್ಷದಲ್ಲೇ ಇನ್ನೂ 75 ಬಸ್ ಗಳನ್ನು ಕೊಡಲಾಗುವುದು. ಬೆಳಗಾವಿ ಹಾಗೂ ಬೆಂಗಳೂರಿನ ನಡೆವೆ ಸಂಚರಿಸುವ ಈ ಬಸ್ ಗಳ ವೇಳಾಪಟ್ಟಿಯನ್ನು ಹೊಸದಾಗಿ ರೂಪಿಸಿ ಸಾರ್ವಜನಿಕರಿಗೆ ಅನೂಕೂಲವಾಗುವ ರೀತಿಯಲ್ಲಿ ಬಸ್ ಗಳನ್ನು ಓಡಿಸಲಾಗುವುದು.

ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2800 ಸಿಬ್ಬಂದಿಗಳನ್ನು ಶೀಘ್ರವಾಗಿ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗುವುದು. ಈಗಾಗಲೇ ನೇಮಕಗೊಂಡಿರುವ 3500 ಸಿಬ್ಬಂದಿಗಳಿಗೆ ಮುಖ್ಯಮಂತ್ರಿಗಳಿಂದ ಶೀಘ್ರವಾಗಿ ಉದ್ಯೋಗ ಪತ್ರಗಳನ್ನೂ ನೀಡಲಾಗುವುದು.

ಸಾರಿಗೆ ಸಂಸ್ಥೆಯ ಡಿಪೋಗಳ ಕಟ್ಟದ ಮೇಲೆ ಸೌರ ವಿದ್ಯುತ ಉತ್ಪಾದನೆ ಫಲಗಳನ್ನು ಅಳವಡಿಸಲು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುವದುರ ಜೊತೆಗೆ ಸಂಸ್ಥೆಗೆ ಆರ್ಥಿಕ ಲಾಭವು ಒದಗುವುದು.

ಸಾರಿಗೆ ಸಂಸ್ಥೆಯ ಸೇವೆಗಳನ್ನು ಉತ್ತಮ ರೀತಿಯಿಂದ ಒದಗಿಸಲು ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಕಾಲ್ ಸೆಂಟರ್ ಗಳನ್ನು ಶೀಘ್ರವಾಗಿ ತೆರೆಯಲಾಗುವುದು.

ಹೆದ್ದಾರಿಗಳಲ್ಲಿ ಸೂಕ್ತವಾದ ಸ್ಥಳಗಳಲ್ಲಿ ಟ್ರಾಮ ಸೆಂಟರ್, ಟ್ರಕ್ ಟರ್ಮಿನಲ್, ಸಿಸಿಟಿವಿಗಳನ್ನು ಅಳವಡಿಸಲಾಗುವುದು. ಅಪಘಾತದ ಸಂದರ್ಭಲ್ಲಿ ಸೂಕ್ತ ವೈದ್ಯಕೀಯ ಸೇವೆ ದೊರೆಯುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಸಾರಿಗೆ ಸಂಸ್ಥೆಯ ಶ್ರೋಯೋಭಿವೃದ್ಧಿಗೆ ಮಂತ್ರಿಗಳು ನೆರವು ನೀಡಬೇಕು. ನೌಕರರ ಪಿಎಫ್, ಎಲ್ಐಸಿ, ಆರೋಗ್ಯಭತ್ಯೆ ದೊರೆಯಬೇಕು. ಸರ್ಕಾರ ಶೀಘ್ರವಾಗಿ ಸಂಸ್ಥೆಗೆ ಬಾಕಿ ಇರುವ ಹಣವನ್ನು ಒದಗಿಸಬೇಕು ಎಂದು ಹೇಳಿದರು.

ಮೂರುಸಾವಿರ ಮಠದ ಪೂಜ್ಯ ಜಗದ್ಗುರು ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶಾಸಕರಾದ ಅಬ್ಬಯ್ಯ ಪ್ರಸಾದ್, ಡಾ.ಎಂ.ಪಿ.ನಾಡಗೌಡ, ಮಲ್ಲಿಕಾರ್ಜುನ ಸಾಹುಕಾರ, ಸದಾನಂದ ವಿ ಡಂಗನವರ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಎಚ್.ಡಿ.ಬಿ.ಆರ್.ಟಿ.ಎಸ್.ನ ವ್ಯವಸ್ಥಾಪಕ ನಿರ್ದೇಶಕ ಎಮ್ ಜಿ ಹಿರೇಮಠ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English