ಹುಬ್ಬಳ್ಳಿ : ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಆಗಸ್ಟ್ 7 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್. ಬೋಜೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು, ಬೆಂಗಳೂರಿನ ಹಿರಿಯ ಪತ್ರಕರ್ತ ಕೆ.ವಿ. ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ದೇವರಾಜಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಶ. ಮಂಜುನಾಥ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಸಂಘದ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ದತ್ತಿ ಸ್ಥಾಪಿತ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದ್ದು, 2018ನೇ ಸಾಲಿಗೆ ಶಿವಮೊಗ್ಗದ ಕ್ರಾಂತಿದೀಪ ದತ್ತಿ ಸ್ಥಾಪಿತ ಮಿಂಚು ಶ್ರೀನಿವಾಸ ವಾರ್ಷಿಕ ಪ್ರಶಸ್ತಿಯನ್ನು ಹಾಸನದ ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕರಾದ ಆರ್.ಪಿ. ವೆಂಕಟೇಶ ಮೂರ್ತಿ, ರಾಯಚೂರಿನ ಈಶಾನ್ಯ ಟೈಮ್ಸ್ ಪತ್ರಿಕೆ ದತ್ತಿ ಸ್ಥಾಪಿತ ಎಡದೊರೆ ವಾರ್ಷಿಕ ಪ್ರಶಸ್ತಿಯನ್ನು ಕಾರವಾರ ಜಿಲ್ಲೆಯ ಕರಾವಳಿ ಮುಂಜಾವು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿ, ತುಮಕೂರಿನ ಗಂಗಾವಾಹಿನಿ ಪತ್ರಿಕೆ ಸ್ಥಾಪಿತ ವೈ.ಕೆ. ರಾಮಯ್ಯ ವಾರ್ಷಿಕ ಪ್ರಶಸ್ತಿಯನ್ನು ವಿಜಯಪುರ ರಾಜಮಾರ್ಗ ಪತ್ರಿಕೆ ಸಂಪಾದಕ ಪಿ.ವಿ. ಮಮದಾಪುರ, ತುಮಕೂರಿನ ಸತ್ಯದರ್ಶಿನಿ ಪತ್ರಿಕೆ ದತ್ತಿ ಸ್ಥಾಪಿತ ಕಲ್ಪತರು ವಾರ್ಷಿಕ ಪ್ರಶಸ್ತಿಯನ್ನು ರಾಯಚೂರಿನ ರಾಯಚೂರು ವಾಣಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಅರವಿಂದ ಕುಲಕರ್ಣಿ ಚಿಕ್ಕಮಗಳೂರಿನ ಮಲೆನಾಡು ನಕ್ಷತ್ರ ಪತ್ರಿಕೆ ಸ್ಥಾಪಿತ ಮಲೆನಾಡಸಿರಿ ವಾರ್ಷಿಕ ಪ್ರಶಸ್ತಿಯನ್ನು ಹಾವೇರಿಯ ಮೂಡಣ ಪತ್ರಿಕೆ ಸಂಪಾದಕರಾದ ತೇಜಸ್ವಿನಿ ಕಾಶೆಟ್ಟಿ ಅವರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪುರಸ್ಕೃತರಿಗೆ ರೂ. 2,500 ನಗದು ಹಣ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನೊಳಗೊಂಡಂತೆ ಸನ್ಮಾನಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
Click this button or press Ctrl+G to toggle between Kannada and English