ಉಡುಪಿ : ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿದ್ದ ಬೆಲೆಬಾಳುವ, ಅಮೂಲ್ಯ ಸೊತ್ತುಗಳನ್ನು ಸುರಕ್ಷತೆಯ ದೃಷ್ಠಿಯಿಂದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇಂದು ಪೊಲೀಸರ ಸಮ್ಮುಖದಲ್ಲಿ ಉಡುಪಿಯ ಶಿರೂರು ಮಠಕ್ಕೆ ತಂದು ಅಲ್ಲಿನ ಲಾಕರ್‌ನಲ್ಲಿರಿಸಿದರು.
ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಜು.19ರಂದು ಮೃತಪಟ್ಟ ನಂತರ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಮೂಲ ಮಠವನ್ನು ತಮ್ಮ ಸುಪರ್ದಿಗೆ ಪಡೆದು ಬಿಗಿ ಭದ್ರತೆಯನ್ನು ಒದಗಿಸಿದ್ದರು. ತೀರಾ ಗ್ರಾಮೀಣ ಪ್ರದೇಶವಾದ ಶಿರೂರಿನ ಮೂಲಮಠದಲ್ಲಿರುವ ಬೆಲೆಬಾಳುವ ಹಲವು ಸೊತ್ತುಗಳನ್ನು ಇದೀಗ ಸುರಕ್ಷತೆಗಾಗಿ ಉಡುಪಿಯ ಶಿರೂರು ಮಠಕ್ಕೆ ತಂದು ಇಲ್ಲಿನ ಲಾಕರ್‌ನಲ್ಲಿ ಇರಿಸುವುದಕ್ಕಾಗಿ ಸೋದೆ ಸ್ವಾಮೀಜಿ ಇಂದು ಸಂಜೆ ವೇಳೆ ಮೂಲ ಮಠಕ್ಕೆ ತೆರಳಿದ್ದರು.
ಸೋದೆ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ರತ್ನ ಕುಮಾರ್ ಜೊತೆಗೆ ಸೋದೆ ಸ್ವಾಮೀಜಿ ಪೊಲೀಸರ ಸಮ್ಮುಖದಲ್ಲಿ ಮೂಲ ಮಠದಲ್ಲಿದ್ದ ಮುಖ್ಯಪ್ರಾಣ ದೇವರ ಬೆಳ್ಳಿಯ ಮುಖವಾಡ, ಚಿನ್ನಾಭರಣಗಳು, ಬೆಳ್ಳಿಯ ಆಭರಣಗಳು, ಪೂಜಾ ಸಾಮಾಗ್ರಿ ಗಳನ್ನು ಪಡೆದುಕೊಂಡರು. ಇವುಗಳ ವೌಲ್ಯಗಳ ಬಗ್ಗೆ ಯಾವುದೇ ಲೆಕ್ಕಾಚಾರ ಮಾಡಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.
ಬೆಳ್ಳಿಯ ಪಲ್ಲಕಿ ಹಾಗೂ ದೇವರ ಮೇಲಿದ್ದ ಸ್ವಾಮೀಜಿಯ ಚಿನ್ನದ ಲಾಕೆಟ್‌ನ್ನು ಸದ್ಯ ಅಲ್ಲೇ ಉಳಿಸಿಕೊಳ್ಳಲಾಗಿದೆ. ಆದರೆ ಇದರಲ್ಲಿ ಸ್ವಾಮೀಜಿ ಧರಿಸುತ್ತಿದ್ದ ಯಾವುದೇ ಚಿನ್ನಾಭರಣಗಳಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ. ಮೂಲ ಮಠದಿಂದ ಪಡೆದ ಈ ಸೊತ್ತುಗಳನ್ನು ಬಿಗಿ ಭದ್ರತೆಯಲ್ಲಿ ಉಡುಪಿ ಶಿರೂರು ಮಠಕ್ಕೆ ರಾತ್ರಿ 9ಗಂಟೆ ಸುಮಾರಿಗೆ ತರಲಾಯಿತು.
ಇಲ್ಲಿ ಸ್ವಾಮೀಜಿ, ಪೊಲೀಸರ ಸಮ್ಮಖದಲ್ಲಿ ಲಾಕರ್‌ನ ಬೀಗ ತೆರೆದು ಎಲ್ಲ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಇರಿಸಿದರು. ಇನ್ನು ಲಾಕರ್‌ನ ಕೀ ಸೋದೆ ಮಠದ ಅಧೀನದಲ್ಲಿ ಇರುತ್ತದೆ. ದೇವರ ಮೇಲಿರುವ ಸ್ವಾಮೀಜಿಯ ಲಾಕೆಟ್ ಹಾಗೂ ಇತರ ಆಭರಣಗಳನ್ನು ಎರಡು ದಿನಗಳಲ್ಲಿ ತಂದು ಲಾಕರ್‌ನಲ್ಲಿ ಇರಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಪೊಲೀಸರು ಎಲ್ಲವನ್ನು ವಿಡಿಯೋ ಚಿತ್ರೀಕರಣ ಮೂಲಕ ದಾಖಲಿಸಿಕೊಂಡರು. ಶಿರೂರು ಮಠದ ಉಸ್ತುವಾರಿ ಅಪ್ಪು ತಂತ್ರಿ ಹಾಗೂ ಸೋದೆ ಸ್ವಾಮೀಜಿ ನೇಮಕ ಮಾಡಿರುವ ಉಸ್ತುವಾರಿ ವಿಠಲ ಭಟ್, ಉಡುಪಿ ನಗರ ಠಾಣಾಧಿಕಾರಿಗಳಾದ ಅನಂತ ಪದ್ಮನಾಭ, ಅಣ್ಣಯ್ಯ ಗೊಲ್ಲ ಮತ್ತಿತ್ತರರು ಹಾಜರಿದ್ದರು.
ಉಡುಪಿ ಶಿರೂರು ಮಠಕ್ಕೆ ಒದಗಿಸಲಾದ ಪೊಲೀಸ್ ಭದ್ರತೆ ಮುಂದುವರಿ ಯಲಿದೆ. ಎಎಸ್ಸೈ ರತ್ನಾಕರ್ ನೇತೃತ್ವದಲ್ಲಿ 10 ಮಂದಿ ಪೊಲೀಸರು ಬೆಳಗ್ಗಿನ ಪಾಳಿ ಹಾಗೂ ಎಎಸ್ಸೈ ನಾರಾಯಣ ನೇತೃತ್ವದಲ್ಲಿ 15 ಪೊಲೀಸರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಮಹಿಳಾ ಪೊಲೀಸರು ಹಾಗೂ ಗೃಹಕ್ಷಕದಳದವರು ಕೂಡ ಇದ್ದಾರೆ.
Click this button or press Ctrl+G to toggle between Kannada and English