ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡಿದ ಜಯಮಾಲಾ

11:28 PM, Sunday, August 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

jayamala ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಮೊದಲ ಬಾರಿ ಭಾನುವಾರ ಜಿಲ್ಲೆಗೆ ಆಗಮಿಸಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಪಕ್ಷದ ಕಾರ್ಯಕರ್ತ ರೊಂದಿಗೆ ಸಮಾಲೋಚನೆ ನಡೆಸಿದರು.

ಉಡುಪಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಕರಾವಳಿಯವಳೇ ಆಗಿರುವುದರಿಂದ ಉಡುಪಿ ಉಸ್ತುವಾರಿ ಸಚಿವೆಯಾಗಿ ನೇಮಕಗೊಂಡಿರುವುದು ಅತ್ಯಂತ ಖುಷಿ ನೀಡಿದೆ. ನಾನು ಬಯಸದೇ, ತಾನಾಗಿ ಒಲಿದು ಬಂದಿರುವುದರಿಂದ ಒಳ್ಳೆಯ ಕೆಲಸ ಮಾಡುವುದು ನನ್ನ ಆದ್ಯತೆ. ಸರಕಾರ ರೂಪಿಸಿರುವ ಎಲ್ಲಾ ಯೋಜನೆ ಗಳನ್ನು ಜನರಿಗೆ ತಲುಪಿಸುವುದು ನನ್ನ ಗುರಿಯಾಗಿದೆ ಎಂದರು.

ಗರ್ಭಿಣಿ ಮಹಿಳೆಯರಿಗಾಗಿ ಪ್ರಾರಂಭಿಸಲಾದ ಮಾತೃಪೂರ್ಣ ಯೋಜನೆ ಯನ್ನು ನಿಲ್ಲಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.

ರಕ್ತಹೀನತೆ ಹಾಗೂ ಅಪೌಷ್ಠಿಕ ಸಮಸ್ಯೆಗಳಿಂದ ಬಳಲುವ ಬಡ ಮಹಿಳೆಯರಿಗಾಗಿ ಈ ಯೋಜನೆಯನ್ನು ಜಾರಿ ಗೊಳಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ರಾಮನಗರ ಜಿಲ್ಲೆಗಳನ್ನು ಹೊರತು ಪಡಿಸಿದರೆ ರಾಜ್ಯದ ಉಳಿದ 26 ಜಿಲ್ಲೆಗಳಲ್ಲಿ ಈ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದು ಕೇಂದ್ರ ಸರಕಾರ ಪುರಸ್ಕೃತ ಯೋಜನೆ ಎಂದವರು ನುಡಿದರು.

ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಲ್ಲಿ ಅತ್ಯಂತ ಅವಶ್ಯಕವಾದ ಹಾಲು ಹಾಗೂ ಮೊಟ್ಟೆಯನ್ನು ನೀಡುತ್ತೇವೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಕಾಳುಗಳನ್ನು ನೀಡಲಾಗುತ್ತದೆ. ಇದರ ಬದಲು ಹಣ ನೀಡಿದರೆ ಅದನ್ನು ಮನೆಯವರು ಕಿತ್ತುಕೊಳ್ಳದೇ ಬಿಡುವುದಿಲ್ಲ ಎಂದು ಹೇಳಿದರು.

ಕರಾವಳಿ ಜಿಲ್ಲೆಗಳಲ್ಲಿ ಎರಡು ಕಿ.ಮೀ. ದೂರದ ಅಂಗನವಾಡಿಗೆ ಬರುವುದು ಸ್ವಲ್ಪ ಸಮಸ್ಯೆಯಾಗಿದೆ. ಆದರೆ ತುಂಬಾ ಬಡತನ ಇರುವ ಕಡೆಗಳಲ್ಲಿ ಹೆಣ್ಣು ಮಕ್ಕಳಿಗೆ ಊಟ ಮಾಡಲು ಬಿಡುವುದಿಲ್ಲ. ಹಾಗೆ ಕೊಟ್ಟರೆ ಮನೆಯವರು ತೆಗೆದುಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಅಂಗನವಾಡಿಯಲ್ಲಿ ಆಹಾರ ನೀಡ ಲಾಗುತ್ತದೆ ಎಂದರು.

ಗರ್ಭಿಣಿ ಮಹಿಳೆಯರಿಗೆ ಖನಿಜಾಂಶ, ಕಬ್ಬಿಣದ ಸತ್ವ ಹಾಗೂ ಪ್ರೋಟಿನ್‌ಗಳು ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ. ಹೀಗಾಗಿ ಹೆರಿಗೆ ಬಳಿಕ ಮನೆಯವರ ಮೂಲಕ ಪೌಷ್ಠಿಕ ಆಹಾರ ತಲುಪಿಸಲಾಗುತ್ತ. ಏನಿದ್ದರೂ ಕರ್ನಾಟಕದಲ್ಲಿ ಈ ಯೋಜನೆ ಅತ್ಯಂತ ಯಶಸ್ವಿಯಾಗಿದೆ ಎಂದು ಸಚಿವೆ ತಿಳಿಸಿದರು.

ಜಿಲ್ಲೆಯ ಐವರು ಶಾಸಕರು ಬಿಜೆಪಿಯವರಾಗಿರುವುದರಿಂದ ಸಮನ್ವಯತೆ ಸವಾಲಾಗದೇ ಎಂದು ಕೇಳಿದಾಗ, ನಾವು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಅವರಿಗೂ ಜವಾಬ್ದಾರಿಗಳಿವೆ. ಇದು ಜನರ ಕೆಲಸ ಎಂದು ತಿಳಿದು ಒಟ್ಟಿಗೆ ಕೆಲಸ ಮಾಡಬೇಕು. ಹೀಗಾಗಿ ಇದೊಂದು ಸವಾಲು ಅನಿಸುವುದಿಲ್ಲ ಎಂದು ವಿವರಿಸಿದರು.

ಕಾನೂನು ಸುವ್ಯವಸ್ಥೆಯಲ್ಲಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದ್ದ ಉಡುಪಿಯಲ್ಲಿ ಇತ್ತೀಚೆಗೆ ಸತತ ಕೊಲೆ ಹಾಗೂ ಇತರ ಘಟನೆಗಳು ನಡೆದಿರುವುದರ ಕುರಿತು ಪ್ರಶ್ನಿಸಿದಾಗ, ಪೊಲೀಸರು ಇವುಗಳ ಬಗ್ಗೆ ತನಿಖೆ ಮಾಡುತಿದ್ದಾರೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಹೆಚ್ಚು ಮಾತನಾಡುವಂತಿಲ್ಲ ಎಂದರು.

ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಎಂ.ಎ.ಗಫೂರ್, ದೇವಿಪ್ರಸಾದ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English