ಮೂಡಬಿದಿರೆ: “ಬರವಣಿಗೆ ನಮ್ಮೊಳಗಿನ ನೋವಿನ ಬಿಡುಗಡೆಯ ಹಾದಿ ಹಾಗೂ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಇರುವ ಆಯುಧ. ಹಾಗಾಗಿ ಹೆಣ್ಣುಮಕ್ಕಳು ಇದನ್ನು ರೂಢಿಸಿಕೊಂಡು, ಹೆಚ್ಚೆಚ್ಚು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು” ಎಂದು ಲೇಖಕಿ ಡಾ. ಸುಲತಾ ವಿದ್ಯಾಧರ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ಲೇಖಕಿಯರು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
“12ನೇ ಶತಮಾನ ವಚನ ಸಾಹಿತ್ಯ ಲೇಖಕಿ ಪರಂಪರೆಯನ್ನು ಹುಟ್ಟುಹಾಕುವಲ್ಲಿ ಕಾರಣವಾಯಿತು. ಆ ಕಾಲಘಟ್ಟದಿಂದ ಹೆಣ್ಣುಮಕ್ಕಳು ಒಬ್ಬೊಬ್ಬರಾಗಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಾ ಬಂದರು. ಆ ಸಾಲಿಗೆ ಇಂದು ಮಹಾನ್ ಲೇಖಕಿಯರು ಸೇರ್ಪಡೆಯಾಗಿದ್ದಾರೆ. ಆದರೂ ಇಂದಿಗೂ ಲೇಖಕಿಯರನ್ನು ಕಡೆಗಣಿಸಲಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
“ಸ್ತ್ರೀವಾದದ ಅರ್ಥವನ್ನು ಪುರುಷ ದ್ವೇಷಿ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ಅದು ತಪ್ಪು ಕಲ್ಪನೆ. ವ್ಯವಸ್ಥೆಯಲ್ಲಿರುವ ಮೂಢ ಆಚರಣೆಗಳನ್ನು ಪ್ರಶ್ನಿಸುವ, ಅದರ ಬದಲಾವಣೆಯನ್ನು ಬಯಸುವುದೇ ಸ್ತ್ರೀವಾದದ ಮುಖ್ಯ ಉದ್ದೇಶ” ಎಂದು ತಿಳಿಸಿದರು.
“ಸ್ತ್ರೀ ಸಾಹಿತ್ಯ ಎಂದರೆ ನಿರಾಶದಾಯಕ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ಹೆಣ್ಣುಮಕ್ಕಳ ಬರವಣಿಗೆಯನ್ನು ಒಪ್ಪಿಕೊಳ್ಳಲಾರದಂಥ ಮನಸ್ಥಿತಿ ಇಂದಿಗೂ ನಮ್ಮಲ್ಲಿವೆ. ಈ ಮನೋಭಾವವನ್ನು ಸಮಾಜದಿಂದ ಹೋಗಲಾಡಿಸುವ ಪ್ರಕ್ರಿಯೆಯಲ್ಲಿ ಹೆಣ್ಣುಮಕ್ಕಳು ಪ್ರವೃತ್ತರಾಗಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಮಾತನಾಡಿ “ನಮ್ಮ ಸಾಹಿತ್ಯ ಲೋಕದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನವಿದೆ ಎಂದು ಹೇಳಲಾಗುತ್ತದೆ. ಆದರೆ ಅದು ನಕಾರಾತ್ಮಕ ರೀತಿಯಲ್ಲಿರುವುದು ಶೋಚನೀಯ. ಹೆಣ್ಣುಮಕ್ಕಳ ಸಾಹಿತ್ಯವನ್ನು ಅಡುಗೆ ಮನೆ ಸಾಹಿತ್ಯ ಎಂದು ಮೂದಲಿಸಲಾಗುತ್ತದೆ. ಇಂಥಹ ಪರಿಸ್ಥಿತಿಯಲ್ಲಿ ಸ್ತ್ರೀಯರು ತಮ್ಮ ಸಾಹಿತ್ಯ ಪ್ರತಿಭೆಯನ್ನು ನಿರೂಪಿಸುವ ಅನಿವಾರ್ಯತೆ ಇದೆ” ಎಂದು ಹೇಳಿದರು.
“ಅಭಿವ್ಯಕ್ತಿ ಮನೋಭಾವವನ್ನು ತಡೆದಲ್ಲಿ ಸಮಾಜದ ಅಭಿವೃದ್ಧಿ ಕುಂಟಿತಗೊಳ್ಳುತ್ತದೆ. ಇದು ಹೆಣ್ಣುಮಕ್ಕಳಿಗೂ ಸಲ್ಲುತ್ತದೆ. ಹಾಗಾಗಿ ಸ್ತ್ರೀ ಸಾಹಿತ್ಯವನ್ನು ಉತ್ತೇಜಿಸುವ, ಮುಖ್ಯವಾಹಿನಿಗೆ ತರುವ, ಅವರ ಬರವಣಿಗೆಯನ್ನು ಗೌರವಿಸುವ ಕೆಲಸ ನಮ್ಮೆಲ್ಲರಿಂದ ತ್ವರಿತವಾಗಿ ಆಗಬೇಕು” ಎಂದು ಕರೆ ನೀಡಿದರು.
ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ|ಯೋಗೀಶ್ ಕೈರೋಡಿ, ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ|ಕೃಷ್ಣರಾಜ ಕರಬ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English