ಮಂಗಳೂರು: ವಿಜಯ ಬ್ಯಾಂಕಿನ ಸಿಬಂದಿಯೇ ಬ್ಯಾಂಕ್ ಲಾಕರ್‌ನಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣ ಬಜಪೆ ಶಾಖೆಯಲ್ಲಿನಡೆದಿದೆ, ಬ್ಯಾಂಕಿನ ಗುಮಾಸ್ತ ದಯಾಕರ ಶೆಟ್ಟಿ(45) ಎಂಬಾತ 460 ಗ್ರಾಂ ತೂಕದ 13,50,000 ರೂ. ಬೆಲೆಯ ಚಿನ್ನಾಭರಣಗಳನ್ನು ಕಳವುಮಾಡಿರುವ ಸಂಗತಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.
ಬ್ಯಾಂಕಿನ ಗ್ರಾಹಕರಾದ ಅತಿಕಾ ಬಾನು, ಲಾರೆನ್ಸ್ ಫೆರ್ನಾಂಡಿಸ್ ಮತ್ತು ಮಹಮದ್ ಹುಸೈನ್ ಅವರು ತಾವು ಸಾಲಕ್ಕಾಗಿ ಈ ಬ್ಯಾಂಕ್ ಶಾಖೆಯಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು ಬಿಡಿಸಲು ಬಂದಾಗ ಲಾಕರ್‌ನಲ್ಲಿ ಚಿನ್ನಾಭರಣಗಳು ಇಲ್ಲದೆ ಇರುವ ಸಂಗತಿ ಬೆಳಕಿಗೆ ಬಂತು. ಅವುಗಳು ಕಾಣೆಯಾಗಿದ್ದು, ಅಪ್ಪಿತಪ್ಪಿ ಬೇರೆ ಎಲ್ಲಾದರೂ ಇಟ್ಟಿರುವ ಸಾಧ್ಯತೆ ಇದೆ ಎಂದು ಬ್ಯಾಂಕಿನ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು..
ಬ್ಯಾಂಕಿನ ಡಿಜಿಎಂ ಸುಧಾಕರ ಶೆಟ್ಟಿ ಅವರು ಈ ಕುರಿತು ಲಿಖೀತ ದೂರನ್ನು ಬಜಪೆ ಪೊಲೀಸ್ ಠಾಣೆಗೆ ಸಲ್ಲಿಸಿದ್ದರು. ಅದರಂತೆ ಪೊಲೀಸರು ಬ್ಯಾಂಕ್ ಶಾಖೆಗೆ ತೆರಳಿ ಮ್ಯಾನೇಜರ್ ಹರಿಶ್ಚಂದ್ರ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಅನಸೂಯ ಹಾಗೂ ಇತರ ಸಿಬಂದಿಯ ವಿಚಾರಣೆಯನ್ನು ನಡೆಸಿದ್ದರು.
2011ರ ಮಾರ್ಚ್ 4ರಿಂದ ನವೆಂಬರ್ 5ರ ಮಧ್ಯೆ ಇವುಗಳನ್ನು ಬ್ಯಾಂಕಿನ ಲಾಕರ್‌ನಿಂದ ಕಳವು ಮಾಡಲಾಗಿತ್ತು. ಚಿನ್ನದ ಸರ, ನೆಕ್ಲೆಸ್, ಬಳೆ, ಉಂಗುರ, ಗೋಪು ಮುಂತಾದುವುಗಳು ಕಾಣೆಯಾಗಿದ್ದವು.
ಇದೇ ವೇಳೆ ವಿಚಾರಣೆಯನ್ನು ಕೈಗೆತ್ತಿಕೊಂಡ ಪೊಲೀಸರು ಸೀನಿಯರ್ ಕ್ಲರ್ಕ್ ಬಜಪೆ ಕೆಂಜಾರಿನ ದಯಾಕರ ಶೆಟ್ಟಿ ಈ ಹಿಂದೆ ಕೆಲಸ ಮಾಡಿದ್ದ ಬ್ಯಾಂಕ್ ಶಾಖೆಯಲ್ಲಿ ಕೆಲವು ಸಣ್ಣಪುಟ್ಟ ಅವ್ಯವಹಾರಗಳಲ್ಲಿ ತೊಡಗಿದ್ದ ಬಗ್ಗೆ ಬ್ಯಾಂಕಿನ ಅಧಿಕಾರಿಗಳಿಂದ ಮಾಹಿತಿ ಪಡೆದು ಆ ದಿಕ್ಕಿನಲ್ಲಿ ತನಿಖೆಯನ್ನು ಮುಂದುವರಿಸಿದರು.
ದಯಾಕರ ಶೆಟ್ಟಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಚಿನ್ನಾಭರಣಗಳನ್ನು ಕಳವು ಮಾಡಿದ ವಿಚಾರ ಬೆಳಕಿಗೆ ಬಂತು ಎಂದು ಪೊಲೀಸ್ ಅಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
13.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಈಗ ವಶಪಡಿಸಿಕೊಳ್ಳಲಾಗಿದೆ; ಇನ್ನು ಕೆಲವು ಚಿನ್ನಾಭರಣಗಳನ್ನು ಆರೋಪಿ ಮಾರಾಟ ಮಾಡಿದ್ದು, ಅವುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ ಎಂದು ಅಯುಕ್ತರು ವಿವರಿಸಿದರು.
ಆರೋಪಿಗೆ ಸಹಕರಿಸಿದ ಇನ್ನೂ ಕೆಲವು ಸಿಬಂದಿ ಇದ್ದಾರೆ. ಅವರ ಬಂಧನ ಆಗ ಬೇಕಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಈ ರೀತಿ ಚಿನ್ನಾಭರಣಗಳು ಬ್ಯಾಂಕ್ ಸಿಬಂದಿಯಿಂದಲೇ ಕಳವಾಗಿರುವುದರಿಂದ ಬ್ಯಾಂಕಿಗೂ ಕೆಟ್ಟ ಹೆಸರು ಬರುವಂತಾಗಿದೆ. ಗ್ರಾಹಕರಿಗೆ ಬ್ಯಾಂಕಿನ ಮೇಲೆ ವಿಶ್ವಾಸ ಇಡುವ ಬಗ್ಗೆ ಸಂಶಯ ಬರುತ್ತಿದೆ.
ಈ ರೀತಿ ಆಗಿರುವುದಕ್ಕೆ ಬ್ಯಾಂಕಿನ ಅಧಿಕಾರಿಗಳ ಕರ್ತವ್ಯ ಲೋಪವೂ ಎದ್ದು ಕಾಣುತ್ತದೆ. ಚಿನ್ನಾಭರಣಗಳು ಕಾಣೆಯಾದ ತತ್‌ಕ್ಷಣ ಪೊಲೀಸ್ ದೂರು ನೀಡದೆ ಗ್ರಾಹಕರನ್ನು ಸಮಜಾಯಿಸಲು ಪ್ರಯತ್ನಿಸಿ ಬಳಿಕ ವಿಳಂಬವಾಗಿ ದೂರು ನೀಡಲಾಗಿದೆ. ಅಲ್ಲದೆ ಲಾಕರ್‌ನ ಭದ್ರತೆಗೆ ಸಂಬಂಧಿಸಿ ಇರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ. ಎಂದು ವಿವರಿಸಿದರು.
ಎಸಿಪಿ ಪುಟ್ಟಮಾದಯ್ಯ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ, ಪಿಎಸ್‌ಐ ಅನಂತ ಮುರುಡೇಶ್ವರ, ಎಎಸ್‌ಐಗಳಾದ ಸೀತಾರಾಮ ಗೌಡ ಮತ್ತು ಶಂಕರ ನಾಯರಿ, ಹೆಡ್‌ಕಾನ್ಸ್‌ಟೆಬಲ್ ಪ್ರಕಾಶ್ ಮೂರ್ತಿ, ಕಾನ್ಸ್‌ಟೆಬಲ್‌ಗಳಾದ ರಾಮ, ರಾಜೇಶ್, ಸತೀಶ್, ಬಸವರಾಜ್, ಸಂತೋಷ್, ಜಬ್ಟಾರ್, ಬಾಲಚಂದ್ರ ಅವರು ಸಹಕರಿಸಿದ್ದರು.
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿ ಡಿ. ಧರ್ಮಯ್ಯ, ಬ್ಯಾಂಕಿನ ಡಿಜಿಎಂ ಸುಧಾಕರ ಶೆಟ್ಟಿ, ಮ್ಯಾನೇಜರ್ ಹರಿಶ್ಚಂದ್ರ ಅವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English