ಮಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲಾ ನದಿಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ನೆರೆಯ ಪರಿಸ್ಥತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಕಡಲು ರೌದ್ರವತಾರ ತಾಳಿದೆ.
ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಗಳು ತಟಕ್ಕೆ ಹಿಂದಿರುಗಲಾಗದೇ ಆಳ ಸಮುದ್ರದಲ್ಲೇ ಲಂಗರುಹಾಕಿವೆ. ಸರಿಸುಮಾರು 800 ಮೀನುಗಾರಿಕಾ ದೋಣಿಗಳು ಮಂಗಳೂರು ಮೀನುಗಾರಿಕಾ ಬಂದರಿನಿಂದ ಅಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದವು.
ಆದರೆ ಈ ಪೈಕಿ ಕೆಲವು ಮೀನುಗಾರಿಕಾ ದೋಣಿಗಳು ಹಿಂದಿರುಗಿದ್ದು, ಉಳಿದ ದೋಣಿಗಳು ಬಂದರಿಗೆ ಹಿಂದಿರುಗಲಾಗದೇ ಆಳ ಸಮುದ್ರದಲ್ಲೇ ಲಂಗರು ಹಾಕಿವೆ. ಈ ದೋಣಿಗಳಿಂದ ಅಪಾಯದ ಮುನ್ಸೂಚನೆ ದೊರೆತರೆ ತತ್ಕ್ಷಣ ರಕ್ಷಣೆಗೆ ತೆರಳಲು ತಡರಕ್ಷಣಾ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಇನ್ನೊಂದೆಡೆ ಮೇಘ ಸ್ಫೋಟಕ್ಕೆ ನೆರೆಯ ಕೇರಳದ ತತ್ತರಿಸಿದೆ. ಕೇರಳ ಕರಾವಳಿಯಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ಕಾಸರಗೋಡು, ಕಣ್ಣೂರು ಪ್ರದೇಶದಲ್ಲಿ ಆಳೆತ್ತರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಲವಾರು ಮೀನುಗಾರಿಕಾ ದೋಣಿಗಳು ಹಾನಿಗೊಂಡಿವೆ.
ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಸಮುದ್ರಕ್ಕೆ ಎಸೆಯಲ್ಪಟ್ಟ 4 ಮಂದಿ ಮೀನುಗಾರರನ್ನು ರಕ್ಷಿಸಲಾಗಿದ್ದು, ಒರ್ವ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಕಡಲಲ್ಲಿ ಆಳೆತ್ತರದ ಅಲೆಗಳು ಏಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
Click this button or press Ctrl+G to toggle between Kannada and English