ಕರಾವಳಿ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 5 ದಿನ ಧಾರಕಾರ ಮಳೆ‌..ಹವಾಮಾನ ಇಲಾಖೆ ಮುನ್ನೆಚ್ಚರಿಕೆ!

1:22 PM, Saturday, August 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

mangaluruಮಂಗಳೂರು: ಕರಾವಳಿ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್15 ರವರಗೆ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ‌ ತೆರಳುವಂತೆ ಸೂಚನೆ ನೀಡಲಾಗಿದೆ.

ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ ಕರಾವಳಿ ಭಾಗದಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳೂ ಸೇರಿದಂತೆ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆ ಮತ್ತು ದಕ್ಷಿಣ ಒಳನಾಡು ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ.

ಈಗಾಗಲೇ ಈ ಭಾಗದ ಜಲಾಶಯಗಳು ಭರ್ತಿಯಾಗಿದ್ದು, ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಬಿನಿಯಿಂದ 80 ಸಾವಿರ ಕ್ಯೂಸೆಕ್, ಕೆಆರ್‌ಎಸ್ ನಿಂದ 62,655 ಕ್ಯೂಸೆಕ್, ಹಾರಂಗಿಯಿಂದ 22,183 ಕ್ಯೂಸೆಕ್ ಹಾಗು ಹೇಮಾವತಿಯಿಂದ 14,300 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಕಬಿನಿಗೆ ಭಾರೀ ಪ್ರಮಾಣದ ನೀರು ಬರುತ್ತಿದ್ದು, ಈಗಾಗಲೇ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ನಂಜನಗೂಡು ಭಾಗದಲ್ಲಿ‌ ಪ್ರವಾಹ ಪರಿಸ್ಥಿತಿ ಭೀತಿ ಸೃಷ್ಠಿಯಾಗಿದ್ದು, ಮತ್ತಷ್ಟು ನೀರು ಬಿಟ್ಟರೆ ಹಲವು ಪ್ರದೇಶಗಳು ಜಲಾವೃತಗೊಳ್ಳಲಿವೆ, ಅಣೆಕಟ್ಟೆ ಸುರಕ್ಷತಾ ಕ್ರಮವಾಗಿ ಅಗತ್ಯ ನೀರನ್ನು ಹೊರಬಿಡಲು ನಿರ್ಧರಿಸಲಾಗಿದೆ. ಒಟ್ಟಿಗೆ 1.95 ಲಕ್ಷ ಕ್ಯೂಸೆಕ್ ನೀರನ್ನು ಕಬಿನಿ ಜಲಾಶಯದಿಂದ ನದಿಗೆ‌ ಬಿಡಬಹುದಾದ ಕಾರಣ ಅಣೆಕಟ್ಟೆ ಭದ್ರತೆಗೆ ತೊಂದರೆಯಿಲ್ಲ. ಆದರೆ ನದಿ ಪಾತ್ರದ ಪ್ರದೇಶದಲ್ಲಿ‌ ಪ್ರವಾಹ ಉಂಟಾಗಲಿದೆ ಎಂದು ಜಲಾಶಯದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಸುರಕ್ಷಿತ ಸ್ಥಳಕ್ಕೆ ಜನರನ್ನು ಸ್ಥಳಾಂತರಿಸಲು ಮನವಿ ಮಾಡಿದೆ.

ಕಪಿಲ, ಕಾವೇರಿ ನದಿಗಳು ಉಕ್ಕಿ ಹರಿಯುತ್ತಿದ್ದು, ನೀರಿನ ಪ್ರಮಾಣದಲ್ಲಿ‌ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಹಾಗು ತೀರ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಯಾ ಭಾಗದ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಭಾನುವಾರದ ಮಳೆ ಪರಿಸ್ಥಿತಿ ನೋಡಿಕೊಂಡು ಸೋಮವಾರ ರಜೆ ನೀಡಬೇಕೆ ಬೇಡವೇ ಎಂದು ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English