ಮಂಗಳೂರು: ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿ ಹಿಂದುತ್ವವಾದಿಗಳನ್ನು ಹಾಗೂ ಹಿಂದೂ ಸಂಘಟನೆಗಳನ್ನು ಸಿಲುಕಿಸುವ ಸರಕಾರ, ತನಿಖಾ ಸಂಸ್ಥೆಗಳು ಹಾಗೂ ವಿಚಾರವಾದಿಗಳ ಷಡ್ಯಂತ್ರವನ್ನು ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಬಾಲಂಭಟ್ ಹಾಲ್ ನಲ್ಲಿ ಜನಸಂವಾದ ಸಭೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಖ್ಯಾತ ವಾಗ್ಮಿಗಳಾದ ಶ್ರೀ. ಶ್ರೀಕೃಷ್ಣ ಉಪಾಧ್ಯಾಯ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪ್ರಭಾಕರ ನಾಯ್ಕ್ ಇವರು ಉಪಸ್ಥಿತರಿದ್ದರು. ದೀಪಪ್ರಜ್ವಲನೆ ಹಾಗೂ ಶಂಖನಾದದ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ಖ್ಯಾತ ವಾಗ್ಮಿಗಳು, ಟೀಂ ಸ್ವಚ್ಚ ಪುತ್ತೂರಿನ ಸಂಯಜಕರಾದ ಶ್ರೀ. ಶ್ರೀಕೃಷ್ಣ ಉಪಾಧ್ಯಾಯ ಇವರು ಮಾತನಾಡುತ್ತಾ, ಇಲ್ಲದ ಅಪವಾದಕ್ಕೆ ತುತ್ತಾದುದಕ್ಕೆ ಅಖಂಡತೆಯನ್ನು ತೋರಿಸಲು ನಾವು ಸಾರ್ವಜನಿಕ ಜನಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದೇವೆ. ಈ ಪ್ರಸಂಗವು ಅನ್ಯಾಯವನ್ನು ಸುಟ್ಟು ಹಾಕುವ ಬೆಂಕಿ. ಇವತ್ತು ಈ ಬೆಂಕಿಗೆ ಹೊಗೆ ಬರುತ್ತಿದೆ. ಈ ವಿಚಾರವನ್ನು ತಪ್ಪಾಗಿ ತಿಳಿದುಕೊಳಬೇಡಿ. ಇದನ್ನು ತಪ್ಪಾಗಿ ತಿಳಿದುಕೊಂಡರೆ ದುರಂತವೇ ಸರಿ.
ಈ ಅಪವಾದವನ್ನು ಸ್ಥಾಪಿತ ಹಿತಾಸಕ್ತಿಗಳು ಹಾಕಿವೆ. ಯಾವ ಕಾರಣಕ್ಕೆ ರಾಜಕೀಯ ಶಕ್ತಿಗಳು ಈ ಅಪವಾದವನ್ನು ಹಾಕಿದವೋ ಅದು ಸಫಲ ಆಗಬಾರದು. ಈಗಿನ ಸ್ಥಿತಿಯಲ್ಲಿ ತನಿಖೆ ಪೂರ್ಣವಾಗುವಾಗ ನಾವು ಚೂರುಚೂರಾಗುತ್ತೇವೆಯೋ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ. ನಾವೆಲ್ಲರೂ ಕೂಡ ಸಾಧ್ವಿ ಪ್ರಜ್ಞಾಸಿಂಗ್ ಪ್ರಕರಣದಲ್ಲಿ ತೀರ್ಪಿಗಾಗಿ ೮ ವರ್ಷ ಕಾಯಬೇಕಾಯಿತು. ಇತಿಹಾಸವನ್ನು ತಿರುಚಿ ನೋಡಿದಾಗ ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಪ್ರಯತ್ನ ಮಾಡಿದ ವೀರ ಸಾವರ್ಕರ್ ಅವರ ಮೇಲೂ ಕೊಲೆಗಾರ ಎಂಬ ಆರೋಪ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟವನ್ನು ಮಾಡಿದ ಸಾವರ್ಕರ್ ಮೇಲೆ ನಾಥೂರಾಮ್ ಗೋಡ್ಸೆಯವರೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿ ಅವರ ಮನೆಯ ಮೇಲೆ ಕಲ್ಲೆಸೆಯಲಾಯಿತು.
ಪ್ರಸ್ತುತ ದೇಶದ ಪ್ರಧಾನಿಯವರ ಮೇಲೆಯೂ ನರಹಂತಕ ಎಂದು ಮಾಧ್ಯಮಗಳು ಸಾರಿ ಸಾರಿ ಪ್ರಚಾರ ಮಾಡಿದವು. ಅದೇ ಇವತ್ತು ಇತಿಹಾಸವಾಗಿದೆ. ಸತ್ಯಮೇವ ಜಯತೇ ಆದರೆ ಸಮಯ ಬೇಕಾಗುತ್ತದೆ. ಅಲ್ಲಿಯರೆಗೆ ನಾವೆಲ್ಲಾ ಸಂಘಟಿರಾಗೋಣ. ಬೆಂಕಿಯಲ್ಲಿ ಚಿನ್ನದ ಹೊಳಪು ಜಾಸ್ತಿಯಾಗುವುದೇ ವಿನಃ ಕಮ್ಮಿಯಾಗುವುದಿಲ್ಲ. ಸನಾತನ ಪ್ರಭಾತ ವಾರಪತ್ರಿಕೆಯಲ್ಲಿ ಕಾನೂನಿನ ವಿರುದ್ಧವಾಗಿ ಯಾವುದೇ ಅಂಶಗಳನ್ನು ಪ್ರಕಟಿಸಲಾಗುವುದಿಲ್ಲ್ಲ. ಇಂತಹ ಸಂಸ್ಥೆಯ ಮೇಲೆ ದೂರಚಿತ್ರವಾಹಿನಿಯನ್ನು ನೋಡಿ ಸಂಸ್ಥೆಯನ್ನು ಆರೋಪಿ ಮಾಡುವುದು ಸರಿಯಲ್ಲ. ಎಂದು ಹೇಳುತ್ತಿದ್ದರು.
ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಮಾತನಾಡುತ್ತಾ, ‘ಗೌರಿ ಹತ್ಯೆಯ ಕೆಲವೇ ನಿಮಿಷಗಳಲ್ಲಿ ರಾಹುಲ ಗಾಂಧಿಯವರು ಟ್ವೀಟ್ನಲ್ಲಿ ಆರ್.ಎಸ್.ಎಸ್ ನ ಕೈವಾಡವಿದೆ ಎಂದು ಹೇಳಿದರು, ಎಸ್.ಐ.ಟಿಯು ೯ ತಿಂಗಳ ತನಿಖೆಯ ನಂತರವೂ ಈ ನಿಟ್ಟಿನಲ್ಲಿಯೇ ತನಿಖೆಯನ್ನು ಮುಂದುವರಿಸಿದೆ. ಹಾಗಿದ್ದರೆ ರಾಹುಲ ಗಾಂಧಿಯವರಿಗೆ ಈ ಹತ್ಯೆಯ ಬಗ್ಗೆ ಮೊದಲೇ ತಿಳಿದಿತ್ತೇ? ಆಗಿನ ಗ್ರಹಮಂತ್ರಿಗಳಾದ ಪಿ. ಚಿದಂಬರಂರವರು ಇಸ್ಲಾಮಿಕ ಭಯೋತ್ಪಾದನೆಗಿಂತಲೂ ಹಿಂದೂ ಭಯೋತ್ಪಾದನೆ ಅತ್ಯಂತ ಭಯಾನಕವಾಗಿದೆ ಎಂದು ಹೇಳಿದ್ದರು. ಅನಂತರ ವಿವಿಧ ಘಟನಾವಳಿಗಳಲ್ಲಿ ಹಿಂದೂತ್ವವಾದಿಗಳನ್ನು ಸಿಲುಕಿಸಿ ಅವರಿಗೆ ಚಿತ್ರಹಿಂಸೆಯನ್ನು ನೀಡಲಾಯಿತು. ಆದರೆ ಅನೇಕ ವರ್ಷಗಳ ತನಿಖೆಯ ನಂತರವೂ ಇಂದು ಈ ಎಲ್ಲರೂ ನಿರಪರಾಧಿಗಳು ಎಂದು ಬಿಡುಗಡೆ ಹೊಂದಿದ್ದಾರೆ. ಗೌರಿ ಲಂಕೇಶ ಹತ್ಯೆಗೆ ಸಂಬಂಧಿತ ಬಂಧಿತರ ವಿಷಯದಲ್ಲಿ ಸರ್ವೋಚ್ಛ ನ್ಯಾಯಾಲಯವು ಹೇಳಿದ ಯಾವುದೇ ನಿಯಮಗಳನ್ನು ಪಾಲಿಸಲಾಗಿಲ್ಲ, ತನಿಖೆಯ ಕಾರ್ಯಪದ್ಧತಿಯನ್ನು ಪಾಲಿಸಿಲ್ಲ.
ಬಂಧಿತರಿಗೆ ತಮ್ಮ ನ್ಯಾಯವಾದಿಗಳನ್ನು ಆಯ್ದುಕೊಳ್ಳಲು ಎಸ್.ಐ.ಟಿ. ಅವಕಾಶವನ್ನು ಮಾಡಿಕೊಡದೇ ತಾವೇ ನ್ಯಾಯವಾದಿಗಳನ್ನು ನೇಮಿಸಿದೆ. ಅಕ್ಟೋಬರ್ 13 ರಂದು ರಾಮಲಿಂಗಾರೆಡ್ಡಿಯವರು ಹಂತಕರು ಸಿಕ್ಕಿದ್ದಾರೆ ಆದರೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದರು. ಎಸ್.ಐ.ಟಿ ಯು ಅತ್ಯಂತ ಅಮಾನುಷವಾಗಿ ಚಿತ್ರಹಿಂಸೆ ನೀಡಿ ಇಂದು ಬಂಧಿತರಿಂದ ತಮಗೆ ಬೇಕಾದಂತೆ ಹೇಳಿಕೆಗಳನ್ನು ಪಡೆದುಕೊಂಡಿದೆ. ಇಂದು ಗೌರಿಯ ಹತ್ಯೆಗಾಗಿ ಎಸ್.ಐ.ಟಿ ಯ ರಚನೆ ಮಾಡಿರುವ ಸರಕಾರವು 27 ಹಿಂದುತ್ವವಾದಿಗಳ ಕೊಲೆಯ ಬಗ್ಗೆ ಏಕೆ ಕ್ರಮಕೈಗೊಳ್ಳುತ್ತಿಲ್ಲ. ಮಾಧ್ಯಮಗಳ ಮೂಲಕ ಪ್ರತಿದಿನ ವಿವಿಧ ಕಥೆಗಳನ್ನು ರಚಿಸಲಾಗುತ್ತಿದೆ.
ಗೌರಿ ಲಂಕೇಶ ಹಾಗೂ ಕೆ.ಎಸ್ ಭಗವಾನರೊಂದಿಗೆ ಸಮಿತಿಯ ನಡುವೆ ವೈಚಾರಿಕ ಭಿನ್ನತೆ ಇದೆ ಆದರೆ ಯಾವುದೇ ಹಿಂದುತ್ವವಾದಿ ಸಂಘಟನೆಗಳು ಹತ್ಯೆಯ ಹೀನಾಯ ಕೃತ್ಯಗಳನ್ನು ಮಾಡುವುದಿಲ್ಲ, ಬದಲಾಗಿ ಕಾನೂನು ಬದ್ಧವಾಗಿ ಹೋರಾಡುತ್ತವೆ. ಸತ್ಯಕ್ಕೆ ಜಯವಿದೆ. ಹಿಂದೂತ್ವವಾದಿಗಳಿಗೆ ನೀಡಲಾಗುವ ಪ್ರತಿಯೊಂದು ಚಿತ್ರಹಿಂಸೆಯೂ ಈ ಭ್ರಷ್ಟವ್ಯವಸ್ಥೆಯ ಶವಪೆಟ್ಟಿಗೆಗೆ ಹೊಡೆಯಲಾಗುವ ಮೊಳೆಗಳೇ ಆಗಿವೆ. ಧರ್ಮಕ್ಕೆ ಗ್ಲಾನಿ ಬಂದಾಗ ಭಗವಂತನು ಧರ್ಮರಕ್ಷಣೆಗಾಗಿ ಅವತಾರ ತಾಳಿ ಧರ್ಮರಕ್ಷಣೆಯನ್ನು ಮಾಡುತ್ತಾನೆ. ಆಗ ಹಿಂದೂ ರಾಷ್ಟ್ರದ ಸ್ಥಾಪನೆ ಆಗಿಯೇ ಆಗುತ್ತದೆ’ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ಶ್ರೀ. ಆನಂದ ಶೆಟ್ಟಿ ಅಡ್ಯಾರ್, ಶ್ರೀ. ಜೀವನ್ ನೀರ್ ಮಾರ್ಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಲಕ್ಷ್ಮಣ್ ಪವಾರ್, ನ್ಯಾಯವಾದ ಶಿವರಾಮ ಮಣಿಯಾಣಿ, ವಾಸ್ತು ತಜ್ಞರಾದ ದಯಾನಂದ ವಳಚ್ಚಿಲ್ ಸೇರಿದಂತೆ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಶ್ರೀ. ವಿಜಯ ಕುಮಾರ್ ಇವರು ಮಾಡಿದರು, ಕಾರ್ಯಕ್ರಮದ ಮುಕ್ತಾಯದ ಸಂದರ್ಭದಲ್ಲಿ ವಂದೇ ಮಾತರಂ ರಾಷ್ಟ್ರಗೀತೆಯನ್ನು ಪೂರ್ಣವಾಗಿ ಹಾಡಲಾಯಿತು.
Click this button or press Ctrl+G to toggle between Kannada and English