ಚಿಕ್ಕಮಗಳೂರು: ವಾರದಿಂದ ಸುರಿಯುತ್ತಿರುವ ಮಹಾ ಮಳೆಯಿಂದ ಮಲೆನಾಡಿನ ಕಳಸ ಹೆಬ್ಬಾಳೆ ಸೇತುವೆ ಹಾಗೂ ನಿಡುವಾಳೆ ಸೇತುವೆ ಸಂಪೂರ್ಣ ಮುಳುಗಡೆ ಗೊಂಡಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಮಲೆನಾಡಲ್ಲಿ ಮಳೆ ಅಬ್ಬರಕ್ಕೆ ಕಳಸ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆ ಗೊಂಡಿವೆ. ಸೇತುವೆ ಕಾಣದಂತೆ ನೀರು ಹರಿಯುತ್ತಿದ್ದು, ನಿಡುವಾಳೆ ಸೇತುವೆ ಕೂಡ ಸಂಪೂರ್ಣ ಮುಳುಗಡೆ ಗೊಂಡಿದೆ. ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಕೊಟ್ಟಿಗೆಹಾರ-ಬಾಳೆಹೊನ್ನೂರು ಸಂಪರ್ಕ ಕಡಿತವಾಗಿದೆ.ಶೃಂಗೇರಿ ಸಮೀಪದ ಕೆರೆಕಟ್ಟೆ ರಸ್ತೆಯ ಮೇಲೆ ತುಂಗೆ ಹರಿಯುತ್ತಿದ್ದು, ಕಗ್ಗನಾಳ ಸಮೀಪ ರಸ್ತೆಯ ಮೇಲೆ ಭದ್ರಾ ನದಿ ಹರಿಯುತ್ತಿದ್ದಾಳೆ.
ಹೊರನಾಡು-ಕಳಸ ಸಂಪರ್ಕ ಕಡಿತವಾಗಿ ಮಾರ್ಗ ಮಧ್ಯೆ ಹೊರನಾಡು ಪ್ರವಾಸಿಗರು ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನೂಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಮಲೆನಾಡಿನಲ್ಲಿ ಮಳೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಬೃಹತ್ ಮರ ಬಿದ್ದು, ಬೆಂಗಳೂರು-ಹೊನ್ನಾವರ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗಂಟೆಗಣಿವೆ ಬಳಿ ಬೃಹತ್ ಮರವೊಂದು ಬಿದ್ದಿದ್ದು, ಸುಮಾರು ಒಂದು ಕಿ.ಮೀ. ಸಾಲುಗಟ್ಟಿ ವಾಹನಗಳು ನಿಂತಿವೆ. ಮರ ತೆರವುಗೊಳಿಸಲು ಅಧಿಕಾರಿಗಳು ಪರದಾಡುವಂತಾಗಿದೆ.ಕೊಟ್ಟಿಗೆಹಾರದ ಮೂಲಕ ಮಾಗುಂಡಿ ಮಾರ್ಗವಾಗಿ ಬಾಳೆಹೊನ್ನೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆರಕ್ಕೂ ಹೆಚ್ಚು ಖಾಸಗಿ ಬಸ್ಗಳ ಸಂಚಾರ ಸ್ಥಗಿತ ಗೊಂಡು ನಿಂತಿವೆ.
ಬಾಳೆಹೊನ್ನೂರಿನಲ್ಲಿ ನದಿ ನೀರಿನಿಂದ ದಿನಸಿ ಅಂಗಡಿಗಳು ಜಲಾವೃತಗೊಂಡು ಲಕ್ಷಾಂತರ ರೂ. ನಷ್ಟವಾಗಿದೆ. ಉಳಿದ ಸಾಮಾಗ್ರಿಗಳನ್ನು ಸಂರಕ್ಷಿಸಲು ಅಂಗಡಿ ಮಾಲೀಕರು ಹರಸಾಹಸ ಪಡುತ್ತಿದ್ದಾರೆ. ತುಂಗಾ, ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮಂಗಳೂರು-ಆಗುಂಬೆ, ಜಯಪುರ-ಕೊಪ್ಪ, ಕಳಸ-ಹೊರನಾಡು ಮಾರ್ಗ ಬಂದ್ ಆಗಿವೆ. ಶೃಂಗೇರಿ ಸಮೀಪದ ಕೆರೆಕಟ್ಟೆ ರಸ್ತೆಯ ಮೇಲೆ ತುಂಗೆ ಹರಿಯುತ್ತಿದ್ದರೆ, ಕಗ್ಗನಾಳ ಸಮೀಪ ರಸ್ತೆಯ ಮೇಲೆ ಭದ್ರಾ ನದಿ ಹರಿಯುತ್ತಿದೆ.
Click this button or press Ctrl+G to toggle between Kannada and English