ಉಡುಪಿ: ಕೊರಗಜ್ಜ ಇದು ಕರಾವಳಿಗರ ಆರಾಧ್ಯ ದೈವ. ಕಲಿಗಾಲದಲ್ಲೂ ಕೊರಗಜ್ಜನ ಪವಾಡ ಮೇಲಿಂದ ಮೇಲೆ ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಾ ಬಂದಿದೆ. ಅಂತಹ ಕೊರಗಜ್ಜನನ್ನೇ ಕದ್ದವರ ಕಥೆ ಏನಾಯ್ತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನೋಶಿವಾಂಶ ಸಂಭೂತ ಕೊರಗಜ್ಜ ಎನ್ನುವುದು ಕರಾವಳಿಗರ ಇಷ್ಟ ದೈವ. ಏನೇ ಕಷ್ಟ ಬರಲಿ ಮನೆಯ ಸ್ವತ್ತು ಕಳ್ಳತನವಾಗಲಿ, ಮಕ್ಕಳಿಗೆ ಕಾಯಿಲೆ ಬಾಧಿಸಲಿ ಕೊರಗಜ್ಜನಿಗೊಂದು ವೀಳ್ಯದೆಲೆಯ ಹರಕೆ ಹೊತ್ತರೆ ಸಾಕು, ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ಇಲ್ಲಿಯವರ ನಂಬಿಕೆ. ಇಂತಹ ಕೊರಗಜ್ಜನ ವಿಗ್ರಹವೇ ಗುಡಿಯಿಂದ ಕಾಣೆಯಾದ ಘಟನೆ ಉಡುಪಿ ಜಿಲ್ಲೆ ಹಿರಿಯಡ್ಕದ ಪಡ್ಡಾಮ್ ಎಂಬಲ್ಲಿ ನಡೆದಿತ್ತು. ಆದರೆ ಅದು ಮತ್ತೆ ಪ್ರತ್ಯಕ್ಷವಾಗುವ ಮೂಲಕ ಪವಾಡ ಸೃಷ್ಟಿಸಿದೆ.
ಹೌದು… ಭಕ್ತಿಯಿಂದ ನಂಬುವ ದೈವಮೂರ್ತಿಯೇ ಕಾಣೆಯಾದರೆ ಜನರ ಪಾಡೇನು? ಹಾಗಾಗಿ ಪಡ್ಡಾಮ್ ಎಂಬ ಹಳ್ಳಿಯ ಜನರು ದೇವರಿಗೇ ಒಂದು ಸವಾಲನ್ನು ಹಾಕಿದ್ದರು. ನಿನ್ನ ಕಾರಣಿಕವನ್ನು ನೀನು ತೋರಿಸದೇ ಹೋದರೆ ನಾವು ನಿನಗೆ ಪೂಜೆ ಮಾಡಲ್ಲ. ನಿನ್ನ ಮೂರ್ತಿ ಕದ್ದವರು ಯಾರೆಂದು ನೀನೇ ಹುಡುಕಿಕೊಡಬೇಕು ಅಂತ ದೂರು ಕೊಟ್ಟಿದ್ದರು. ಅದೇ ರೀತಿ ಮರುದಿನವೇ ಕೊರಗಜ್ಜನ ವಿಗ್ರಹವನ್ನು ಕದ್ದವರು, ಗುಡಿಯ ಹೊರ ಭಾಗದಲ್ಲಿ ಗೋಣಿ ಚೀಲದಲ್ಲಿ ಬಿಟ್ಟು ಹೋಗಿದ್ದಾರೆ.
ಇದರಿಂದ ಕೊರಗಜ್ಜನ ಪವಾಡ ಕಂಡು ಜನವಿಸ್ಮಿತರಾಗಿದ್ದಾರೆ. ಈ ಮೂಲಕ ಪೊಲೀಸರಿಗೆ ದೂರು ನೀಡುವ ಮುನ್ನವೇ ಕೊರಗಜ್ಜನಿಗೆ ದೂರು ನೀಡಿದ್ದ ಗ್ರಾಮಸ್ಥರಿಗೆ ದೈವದ ಮೇಲಿನ ಭರವಸೆ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಕೊರಗಜ್ಜನ ಗುಡಿಯನ್ನು ಶುದ್ಧಮಾಡಿ ಮತ್ತೊಮ್ಮೆ ಪಂಚಲೋಹದ ಮೂರ್ತಿ ಪ್ರತಿಷ್ಠಾಪಿಸಲು ತಯಾರಿ ನಡೆಸಿದ್ದಾರೆ. ಜೊತೆಗೆ ಸನ್ನಿಧಾನದಲ್ಲಿ ದರ್ಶನ ಸೇವೆ ನಡೆಸಲು ಸಹ ಮುಂದಾಗಿದ್ದಾರೆ. ಹಿರಿಯಡ್ಕ ಪೊಲೀಸರು ಕೂಡಾ ನಮ್ಮ ಕೆಲಸವನ್ನು ದೈವವೇ ಮಾಡಿದೆ ಎಂಬ ಶೃದ್ಧೆಯನ್ನು ಪ್ರಕಟಿಸಿದ್ದಾರೆ.
ಬಡವರ ದೈವ ಕೊರಗಜ್ಜ, ತನ್ನ ಪವಾಡಗಳಿಂದ ಮಂಗಳೂರು-ಉಡುಪಿ ಭಾಗದ ಜನರ ಮನಸ್ಸಲ್ಲಿ ಮಹತ್ವದ ಸ್ಥಾನ ಹೊಂದಿದ್ದಾನೆ. ಇದೀಗ ಪಡ್ಡಾಮ್ ದೈವಸ್ಥಾನದಲ್ಲಿ ಕೊರಗಜ್ಜ ಕುತೂಹಲದ ಕೇಂದ್ರಬಿಂದು ಎನಿಸಿದ್ದಾನೆ. ನಂಬಿಕೆಗೂ, ಮೂಢನಂಬಿಕೆಗೂ ತೆಳುವಾದ ವ್ಯತ್ಯಾಸ ಇರುತ್ತೆ. ದೇವರ ಭಯ ಎಷ್ಟೋ ಜನರ ಮನಪರಿವರ್ತನೆಗೆ ಕಾರಣವಾಗಿದೆ. ಕೊರಗಜ್ಜನ ವಿಗ್ರಹ ಕದ್ದವನಿಗೂ ದೇವರ ಭಯವಾಗಿರಬೇಕು. ದೈವದ ಪವಾಡವೋ ಕದ್ದವನ ಭಯ ಕೆಲಸ ಮಾಡಿತೋ ಅನ್ನುವುದು ಸದ್ಯ ಯಕ್ಷಪ್ರಶ್ನೆಯಾಗಿ ಉಳಿದಿದೆಯಾದರೂ ವಿಗ್ರಹ ಮತ್ತೆ ಸ್ವಸ್ಥಾನ ಸೇರಿರುವುದು ಭಕ್ತರಲ್ಲಿ ಸಮಾಧಾನ ತರಿಸಿದೆ.
Click this button or press Ctrl+G to toggle between Kannada and English