ಮಂಗಳೂರು: ಇಂದು ಕೂಡ ದ.ಕ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರೂ ನೆರೆ ಹಾವಳಿ ಮುಂದುವರಿದಿದೆ. ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೆರೆ ಹಾವಳಿಯಿಂದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ನೆರೆಯಿಂದ ಸಂತ್ರಸ್ತರಾದ 101 ಮನೆಗಳ 539 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಜಿಲ್ಲೆಯ ಆಲಡ್ಕ, ಕಡಬ, ಕೂಟೇಲು, ಉಪ್ಪಿನಂಗಡಿ, ಗುಂಡ್ಯ, ಶಿರಾಡಿ, ಉದನೆ, ಇಚಿಲಂಪಾಡಿ, ಕುರಿಯಾಳಕೊಪ್ಪ, ಪಡುಬೆಟ್ಟು, ಪಟ್ರಮೆ, ಶಿಶಿಲ, ಶಿಬಾಜೆ ಹಾಗೂ ಸುಳ್ಯ ಭಾಗಗಳಲ್ಲಿ ಹಲವು ಮನೆಗಳು ಜಲಾವೃತವಾಗಿವೆ.
ಭಾರಿ ಮಳೆಗೆ ಭೂಕುಸಿತದಿಂದ ಶಿರಾಡಿ ಘಾಟ್ ಮತ್ತು ಮಡಿಕೇರಿ ಘಾಟ್ ರಸ್ತೆ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್ಆರ್ಟಿಸಿ ವಿಭಾಗದಿಂದ ಮಂಗಳೂರು-ಬೆಂಗಳೂರು ಮಧ್ಯೆ ವಯಾ ಎಸ್.ಕೆ. ಬಾರ್ಡರ್, ಕುದುರೆಮುಖ ಮಾರ್ಗದಲ್ಲಿ ಇಂದಿನಿಂದ ಹಗಲು ವೊಲ್ವೋ ಬಸ್ ಸಂಚಾರ ಆರಂಭವಾಗಲಿದೆ. ಶಿರಾಡಿ ಮತ್ತು ಮಡಿಕೇರಿ ಘಾಟ್ ಸಂಚಾರಕ್ಕೆ ಮುಕ್ತಗೊಳ್ಳುವರೆಗೆ ಕುದುರೆಮುಖ ಮಾರ್ಗದಲ್ಲಿ ಪರ್ಯಾಯ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ .
Click this button or press Ctrl+G to toggle between Kannada and English