ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ನೆರೆ ಪರಿಹಾರ ನಿಧಿಗೆ 2 ಕೋಟಿ ರೂ.

10:17 AM, Monday, August 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

subramanyaಸುಬ್ರಹ್ಮಣ್ಯ : ಅತಿವೃಷ್ಟಿ ಕಡಿಮೆಯಾಗಿ ಪ್ರಕೃತಿ ಶಾಂತಗೊಂಡು ಜನರು, ಪಶು ಪಕ್ಷಿ ಸಂಕುಲ ಶಾಂತಿಯುತವಾಗಿ ಸುಖ, ನೆಮ್ಮದಿಯಿಂದ ಜೀವನ ನಡೆಸಲು ಕೃಪೆ ತೋರುವಂತೆ ಕುಕ್ಕೆ ದೇವರ ಸಾನ್ನಿಧ್ಯದಲ್ಲಿ ಭಾನುವಾರ ಪ್ರಾರ್ಥಿಸಲಾಯಿತು. ಈ ಪ್ರಾರ್ಥನೆಯ ಪ್ರಕಾರ ಸುಬ್ರಹ್ಮಣ್ಯ ದೇವರಿಗೆ 108 ಸೀಯಾಳಾಭಿಷೇಕ ಸೇವೆಯನ್ನು ಆ.21ರಂದು ಬೆಳಗ್ಗೆ 5 ಗಂಟೆಗೆ ನಡೆಸಲಾಗುವುದು. ಅಭಿಷೇಕಕ್ಕೆ ಸೀಯಾಳ ಒದಗಿಸುವ ಭಕ್ತರು ಸೋಮವಾರ ಸಂಜೆಯ ಒಳಗೆ ಶ್ರೀ ದೇವಳದ ಕಚೇರಿಗೆ ಸೀಯಾಳ ಒದಗಿಸಬಹುದು ಎಂದು ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮುಂಡೋಡಿ ತಿಳಿಸಿದರು.

ರಾಜ್ಯದ ಕೊಡಗು,ಮಲೆನಾಡು, ಕರಾವಳಿಯಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡಲು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ 2 ಕೋಟಿ ರೂ. ಮೊತ್ತದ ಸಹಾಯವನ್ನು ನೀಡಲು ನಿರ್ಣಯಿಸಲಾಗಿದೆ.

ಧಾರ್ಮಿಕ ದತ್ತಿ ಆಯುಕ್ತರ ಮೂಲಕ ಸರಕಾರದ ನೆರೆ ಪರಿಹಾರ ನಿಧಿಗೆ ಈ ಮೊತ್ತವನ್ನು ಸಮರ್ಪಿಸಲಾಗುವುದು. ಈ ಮೂಲಕ ರಾಜ್ಯದಲ್ಲಿ ಸಂಕಷ್ಟಕ್ಕೊಳಗಾದವರಿಗೆ ಕುಕ್ಕೆ ದೇವಳವು ಸಹಾಯಹಸ್ತ ನೀಡಲಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ  ಮುಂಡೋಡಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಕ್ಕೆ ದೇವಳದ ಆಡಳಿತ ಮಂಡಳಿಯು ಈ ಬಗ್ಗೆ ತುರ್ತು ಸಭೆ ಕರೆದು ಈ ಮಹತ್ವಪೂರ್ಣ ನಿರ್ಣಯ ಕೈಗೊಂಡಿತು. ಭಕ್ತಾದಿಗಳಿಂದ ಶ್ರೀ ದೇವಳಕ್ಕೆ ಬರುವ ಆದಾಯದ ಒಂದಂಶವನ್ನು ರಾಜ್ಯದ ಜನತೆಯ ಕಷ್ಟಕ್ಕೆ ವಿನಿಯೋಗಿಸಲು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಒಮ್ಮತದ ಅಭಿಪ್ರಾಯ ಸೂಚಿಸಿದ್ದರು ಎಂದರು.

ಈ ವರ್ಷದ ಮಳೆಗಾಲದ ಆರಂಭದಿಂದಲೂ ಗುಡುಗು, ಸಿಡಿಲು, ಮಿಂಚು ಮತ್ತು ಬಿರುಗಾಳಿಯಿಂದ ಜನ, ಪಶುಗಳು ಜೀವ ಕಳೆದುಕೊಂಡಿದ್ದು, ಅಪಾರ ಹಾನಿಯಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಅದರಲ್ಲೂ ಕೊಡಗು ಜಿಲ್ಲೆಯಾದ್ಯಂತ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಜನರು ತಮ್ಮ ಬಂಧು ಬಾಂಧವರನ್ನು, ಮನೆ, ಸೊತ್ತುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಮಾನವೀಯತೆಯಿಂದ ಸಹಾಯಹಸ್ತ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಸ್ಥಳೀಯ ಕುಮಾರಧಾರ ನದಿಯ ನೆರೆಯಿಂದ ಸುಬ್ರಹ್ಮಣ್ಯದ ಪರಿಸರ ಹಾಗೂ ಸಮೀಪದ ಕುಲ್ಕುಂದ ಇತ್ಯಾದಿ ಕಡೆಗಳಲ್ಲಿ ನೆರೆ ನೀರು ಮನೆಯೊಳಗೆ ನುಗ್ಗಿ ಅಪಾರ ಹಾನಿಯುಂಟಾಗಿದೆ. ಈ ಪ್ರದೇಶದಲ್ಲಿ ಹಾನಿಗೊಳಗಾಗಿ ನೆರೆ ನೀರಿನಿಂದ ಸಂತ್ರಸ್ತಗೊಂಡು ನಿರಾಶ್ರಿತರಾದ ಜನರಿಗೆ ಶ್ರೀ ದೇವಳದಿಂದ ಊಟೋಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು ಎಂದು ನಿತ್ಯಾನಂದ ಮುಂಡೋಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕೆ. ಕೃಷ್ಣಮೂರ್ತಿ ಭಟ್‌, ಬಾಲಕೃಷ್ಣ ಗೌಡ ಬಳ್ಳೇರಿ, ಮಹೇಶ್‌ಕುಮಾರ್‌ ಕೆ.ಎಸ್‌, ಮಾಧವ ಡಿ,ಮಾಸ್ಟರ್‌ ಪ್ಲಾನ್‌ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English