ಮಿಜಾರು : ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕಿಕೊಂಡು ಹೋಗಬಾರದು. ಉದ್ಯೋಗವೇ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಬರಬೇಕು. ಅಂತಹ ಕೌಶಲ್ಯವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಅಲಹಬಾದ್ ಐಐಐಟಿ ನಿರ್ದೇಶಕರಾದ ಡಾ. ಪಿ. ನಾಗಭೂಷಣ್ ಹೇಳಿದರು.
ಆಳ್ವಾಸ್ ಕಾಲೇಜಿನ ರೋಸ್ಟ್ರಮ್ ಸ್ಪೀಕರ್ ಕ್ಲಬ್‌ನ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಅನುಸಾರವಾಗಿ ಶಿಕ್ಷಣ ಪಡೆಯಬೇಕೇ ಹೊರತು, ತಂದೆ ತಾಯಿಯ ಇಚ್ಛೆಯಂತೆ ಅಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಪೋಷಕರ ಒತ್ತಾಯಕ್ಕೆ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಇದು ಉತ್ತಮ ಲಕ್ಷಣ ಅಲ್ಲ. ನೀವು ಭವಿಷ್ಯದಲ್ಲಿ ನಿಮ್ಮ ಮಕ್ಕಳ ಇಚ್ಛೆಗೆ ಅನುಸಾರವಾಗಿ ಶಿಕ್ಷಣ ಕೊಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಜೀವನದ ಯಶಸ್ಸಿಗೆ ಕಲಿಕೆ ಎಂಬ ತಳಪಾಯ ಮುಖ್ಯ. ಉದ್ಯೋಗವನ್ನು ಪಡೆಯಲು, ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ವಿಷಯಗಳನ್ನು ಕಲಿಯಬೇಕೆ ಹೊರತು, ತಯಾರಿ ನಡೆಸಬಾರದು. ಎಲ್ಲಾ ಕಾಲೇಜುಗಳಲ್ಲಿ ಇಂಜಿನಿಯರ್‌ಗಳನ್ನು ತಯಾರು ಮಾಡುತ್ತಿದ್ದಾರೆ ಹೊರತು ಸಕಲ ಕೌಶಲ್ಯಗಳಿಂದ ಸಿದ್ದಗೊಳಿಸುತ್ತಿಲ್ಲ. ಆದರೆ ಆಳ್ವಾಸ್ ಕಾಲೇಜ್‌ನ ಇಂಜಿನಿಯರ್ ವಿದ್ಯಾರ್ಥಿಗಳು ಇದಕ್ಕೆ ಹೊರತಾಗಿದ್ದಾರೆ ಎಂದು ತಿಳಿಸಿದರು.
ಎಲ್ಲರೂ ಸಮಸ್ಯೆಗಳಿಗೆ ಕಾರಣ ಹುಡುಕುತ್ತಾರೆಯೇ ಹೊರತು ಯಾರು ಎದುರಿಸಲು ಸಿದ್ಧರಿಲ್ಲ. ಜೀವನದಲ್ಲಿ ಆಗಿ ಹೋದ ಘಟನೆಯ ಬಗ್ಗೆ ಯೋಚನೆ ಮಾಡಬಾರದು. ನಾಳೆಯ ಬಗ್ಗೆ ಚಿಂತಿಸದೇ ಇಂದಿನ ಬಗ್ಗೆ ಯೋಜನೆ ಮಾಡಬೇಕು. ನಿಮ್ಮ ಮೇಲೆ ನೀವು ನಂಬಿಕೆ ಇಟ್ಟು ನಿಮ್ಮ ವಿಚಾರಗಳನ್ನ ಧೈರ್ಯದಿಂದ ಹೊರಸೂಸಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ನುಡಿಗಳನ್ನಾಡಿದರು.
ಅಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಈ ಒಪ್ಪಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ವಿವಿಧ ರಂಗಗಳಲ್ಲಿ ಹೆಚ್ಚಿನ ಜ್ಞಾನ ಸಂಪಾದನೆಗೆ ಸಹಕಾರಿಯಾಗಿದೆ. ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ‍್ಯಕ್ರಮದ ಮುಂಚೆ, ಐಐಐಟಿ ಅಲಹಬಾದ್ ಮತ್ತು ಆಳ್ವಾಸ್ ಕಾಲೇಜಿನ ನಡುವಿನ ಒಡಂಬಡಿಕೆಯ ವಿನಿಮಯವು ಆಳ್ವಾಸ್ ಕಾಲೇಜಿನ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಮತ್ತು ಐಐಐಟಿ ಅಲಹಾಬಾದ್‌ನ ನಿರ್ದೇಶಕರಾದ ಡಾ. ಪಿ ನಾಗಭೂಷಣ್ ನಡುವೆ ಆಳ್ವಾಸ್ ಪ್ರತಿಷ್ಠಾನದ ಪ್ರದಾನ ಕಚೇರಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ವಿವಿಧ ಇಂಜಿನಿಯರ್ ವಿಭಾಗಗಳ ಮುಖ್ಯಸ್ಥರು ಮತ್ತು ಡಾ. ಪಿ ನಾಗಭೂಷಣ್ ರವರ ಪತ್ನಿ ಲಕ್ಷ್ಮಿ ನಾಗಭೂಷಣ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರದ್ಧಾ ಶೆಟ್ಟಿ ನಿರೂಪಣೆ ಮಾಡಿದರು.
Click this button or press Ctrl+G to toggle between Kannada and English