ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಮಹೋತ್ಸವದಂದು ಶುಕ್ರವಾರ ನೂರಾರು ಭಕ್ತಾಧಿಗಳಿಂದ ಶ್ರೀ ದೇವಳದಲ್ಲಿ ಮಡೆಮಡೆಸ್ನಾನ ಸೇವೆ ಜರುಗಿತು.
ಶ್ರೀ ದೇವಳದ ಹೊರಾಂಗಣದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆಯ ಬಳಿಕ ಸುಮಾರು 150ಕ್ಕೂ ಅಧಿಕ ಮಂದಿ ಭಕ್ತಾಧಿಗಳು ಈ ಸೇವೆಯಲ್ಲಿ ಪಾಲ್ಗೊಂಡರು. ಚರ್ಮರೋಗ ಪೀಡಿತ ಸುಮಾರು 7 ವರುಷದ ಪುಟ್ಟ ಬಾಲಕಿಯೋರ್ವಳು ಈ ಮಡೆಮಡೆಸ್ನಾನ ಸೇವೆಯಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಶ್ರೀ ದೇವಳದಲ್ಲಿ ಚಂಪಾಷಷ್ಠಿಯಂದು ಮಡೆಮಡೆಸ್ನಾನದ ವಿಚಾರದಲ್ಲಿ ಭಾರೀ ವಿವಾದವೆದ್ದುದರಿಂದ ಈ ಬಾರಿ ಶ್ರೀ ದೇವಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ತು ಮಾಡಲಾಗಿತ್ತು.
ಧರ್ಮಸಮ್ಮೇಳನ ಮಂಟಪದಲ್ಲಿ ನಡೆದ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಆಗಮ ವಿಧ್ವಾಂಸ ಹಾಗೂ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್ ಧಾರ್ಮಿಕ ಪ್ರವಚನ ನೀಡಿದರು.
ಸುಳ್ಯ ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು.
ಸುಬ್ರಹ್ಮಣ್ಯದ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ಆಶೀರ್ವಚನ ನೀಡಿದರು.
ನೂತನ ರಂಗಮಂದಿರದ ಉದ್ಘಾಟನೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲೆಮಜಲು, ಆದರ್ಶ ಯುವಕ ಮಂಡಲ, ಅಂಗನವಾಡಿ ಕೇಂದ್ರ ಹಾಲೆಮಜಲು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಮತ್ತು ಸ್ವ-ಸಹಾಯ ಸಂಘ, ಸ್ತ್ರೀಶಕ್ತಿ ಸಂಘ ಹಾಲೆಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ನೂತನ ರಂಗಮಂದಿರದ ಉದ್ಘಾಟನಾ ಸಮಾರಂಭವು ನಡೆಯಿತು.
ಸುವರ್ಣ ರಂಗಮಂದಿರವನ್ನು ಸುಳ್ಯ ಶಾಸಕ ಎಸ್. ಅಂಗಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ದೇವರಾಜ್, ತಾ. ಪಂ. ಅಧ್ಯಕ್ಷ ಕೇಶವ ಭಟ್ ಮುಳಿಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಯೋಜನಾಧಿಕಾರಿ ಯೋಗೀಶ್, ಗುತ್ತಿಗಾರು ಗ್ರಾ. ಪಂ. ಸದಸ್ಯರಾದ ಜ್ಯೋತಿ ಪ್ರೇಮಾನಂದ, ಪ್ರಮೀಳಾ ಶಶಿಧರ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕರುಣಾಕರ, ಗೌರವಾಧ್ಯಕ್ಷ ಮೇದಪ್ಪ ಮಾಸ್ತರ್ ಸಂಪ್ಯಾಡಿ ಹಾಗೂ ದಾಮೋದರ ಗೌಡ ಚೆಮ್ಮೂರು ವೇದಿಕೆಯಲ್ಲಿದ್ದರು.
ಈ ಸಂಧರ್ಭದಲ್ಲಿ ರಂಗಮಂದಿರಕ್ಕೆ ಶ್ರಮಿಸಿದ ಗ್ರಾಮ ಅರಣ್ಯ ಸಮಿತಿ ಸದಸ್ಯ ದಿನೇಶ್ ಹಾಲೆಮಜಲು ಹಾಗೂ ಗುತ್ತಿಗೆದಾರ ಕೃಷ್ಣಕುಮಾರ್ ಬಾಳುಗೋಡು, ಸುಬ್ಬಪ್ಪ ಗೌಡ ಕಾಯಾರ, ಶಿವ ಮೆದು ಇವರನ್ನು ಶಾಲಾಭಿವೃಧ್ಧಿ ಸಮಿತಿ ವತಿಯಿಂದ ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುರುವಾರ ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.ಮಂಜೇಶ್ವರದ ನಾಟ್ಯಾಲಯಂ ಸ್ಕೂಲ್ ಆಫ್ ಕ್ಲಾಸಿಕಲ್ ಡ್ಯಾನ್ಸ್ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನಗೊಂಡಿತು.ರಾಜ್ಯೋತ್ಸವ ಪ್ರಶಸ್ತಿ ವಿಜೇತ ರವೀಂದ್ರ ಪ್ರಭು ಮೂಲ್ಕಿ ಮತ್ತು ಬಳಗದವರಿಂದ ಭಕ್ತಿ-ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ತಲೆಗೆ ಕಲ್ಲು ಬಿದ್ದು ಗಂಭೀರ ಗಾಯ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಮಾಸ್ಟರ್ ಪ್ಲಾನರೀ ಯೋಜನೆಯಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಗುರುವಾರ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತನಾಗಿದ್ದ ಸಿಸಿಸಿಎಲ್ ಕಂಪೆನಿಯ ಕಾರ್ಮಿಕನೋರ್ವನ ತಲೆಗೆ ಮೂರನೇ ಮಹಡಿಯಿಂದ ಕಲ್ಲು ಉರುಳಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಬಗ್ಗೆ ವರದಿಯಾಗಿದೆ.
ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳುವನ್ನು ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಭ್ರಮದ ಕಿರುಷಷ್ಠಿ ರಥೋತ್ಸವ
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವವು ಶುಕ್ರವಾರ ಭಕ್ತಿ ಸಂಭ್ರಮದಿಂದ ಜರುಗಿತು.
ಬಳಿಕ ಸವಾರಿಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ಶ್ರೀ ದೇವರಿಗೆ ಪೂಜೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನಗೊಂಡಿತು. ರಾತ್ರಿ ಹೊಸನಗರ ರಾಮಚಂದ್ರಾಪುರದ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಮಹಾಋಷಿ ಅಗಸ್ತ್ಯ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಜರುಗಿತು.
ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿ ಮಹೋತ್ಸವದ ಸಂಧರ್ಭದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನಗೊಂಡಿತು.
Click this button or press Ctrl+G to toggle between Kannada and English