ಮಂಗಳೂರು : ನೆರೆಹೊರೆಯವರನ್ನು ಜೊತೆ ಸೇರಿಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೋಶನಿ ನಿಲಯದ ಕುಟುಂಬ ಸೇವಾ ಸಂಸ್ಥೆ ಹಾಗೂ ಪೋಲಿಸ್ ಠಾಣೆ ಪಾಂಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ವೆಲೆನ್ಸಿಯಾ ಪರಿಸರದ ನೇಬರ್ ಹುಡ್ ಸಭೆಯನ್ನು ಆಯೋಜಿಸಲಾಯಿತು.
ಪಾಂಡೇಶ್ವರ ಪೋಲಿಸ್ ಠಾಣೆಯ ಕಾನ್‌ಸ್ಟೇಬಲ್ ಚಂದ್ರಶೇಖರ್ ಜನ ಸ್ನೇಹಿ ಪೋಲಿಸ್ ಬಗ್ಗೆ ತಿಳಿಸುತ್ತಾ ಸ್ಮಾರ್ಟ್ ಫೋನ್ ಬಳಕೆದಾರರು ಪೊಲೀಸ್ ಆಪ್ ಮೂಲಕ ಪೊಲೀಸ್ ಠಾಣೆಯ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು, ಟ್ರಾಫೀಕ್ ಸಮಸ್ಯೆಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಕುಡ್ಲ ಟ್ರಾಫೀಕ್ ಎಂಬ ವಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿದ್ದಲ್ಲಿ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಸಾರ್ವಜನಿಕರು ಸಮಸ್ಯೆಗಳನ್ನು ಮುಕ್ತವಾಗಿ ಸಂಬಂಧಪಟ್ಟ ಠಾಣೆಗೆ ತಿಳಿಸಬಹುದು ಎಂದು ಅವರು ಹೇಳಿದರು.
ರೋಶನಿ ನಿಲಯದಲ್ಲಿ ನಡೆಯುತ್ತಿರುವ ಯೂತ್ ಫಾರ್ ಜಾಬ್ ಸೆಂಟರ್‌ನ ಸಂಯೋಜಕರಾದಂತಹ ಮುತ್ತುರಾಜ್‌ರವರು ವಿಶೇಷ ಸಾಮಾರ್ಥ್ಯವುಳ್ಳ ಮಕ್ಕಳಿಗಾಗಿ ನಡೆಸುತ್ತಿರುವ ತರಬೇತಿ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.
ಕುಟುಂಬ ಸೇವಾ ಸಂಸ್ಥೆಯ ನಿರ್ದೇಶಕರಾದ ಸಿಸ್ಟರ್ ಹಿಲಾರಿಯ ಪಿಂಟೊ ನೇಬರ್ ಹುಡ್ ಸಭೆ ನಡೆಸುವ ಉದ್ದೇಶದವನ್ನು ತಿಳಿಸುತ್ತಾ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನೇಬರ್ ಹುಡ್ ಸಭೆಯು ಮಹತ್ತರ ಪಾತ್ರವಹಿಸುತ್ತವೆ, ನೆರೆಹೊರೆಯವರು ಜೊತೆಯಾದರೆ ಸ್ಥಳೀಯ ಸಮಸ್ಯೆಗಳನ್ನು ಬಹಳ ಸುಲಭವಾಗಿ ಪರಿಹರಿಸಿಕೊಳ್ಳಬಹುದು, ಈ ನಿಟ್ಟಿನಲ್ಲಿ ನೇಬರ್‌ಹುಡ್ ಸಭೆ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವೆಲೆನ್ಸಿಯಾ ವಾರ್ಡಿನ ಸ್ಥಳೀಯರು ವೆಲೆನ್ಸಿಯಾ ಪರಿಸರದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಸಮಸ್ಯೆಗಳನ್ನು ನಿರ್ವಹಿಸುವ ಸಲುವಾಗಿ ಕೋರ್ ಕಮಿಟಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.
ಕುಟುಂಬ ಸೇವಾ ಸಂಸ್ಥೆಯ ಸಮಾಜ ಕಾರ್ಯಕರ್ತರಾದ ಪವಿತ್ರಾ ಜ್ಯೋತಿಗುಡ್ಡೆ ನಿರೂಪಿಸಿದರು. ರೋಶನಿ ನಿಲಯದ ಸಮಾಜ ಕಾರ್ಯ ವಿದ್ಯಾರ್ಥಿಯಾದಂತಹ ಶ್ರೀಕಾಂತ್ ಮತ್ತು ಸಾಕ್ಷಿ ಜಾಗೃತಿ ಹಾಡನ್ನು ಹಾಡಿದರು. ಜೊತೆಗೆ ಸಮಾಲೋಚಕರಾದ ಶ್ವೇತಲ್ ಅಡ್ಯಾರ್ ಹಾಗೂ ಸಿಬ್ಬಂದಿ ಸಿಲ್ವಿಯಾ ಫೆರಾವೊ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರೆಸಿಲ್ಲಾ ಸ್ವಾಗತಿಸಿ, ನಿಧಿ ವಂದಿಸಿದರು.
Click this button or press Ctrl+G to toggle between Kannada and English