ಮಂಗಳೂರು : ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ರಾಷ್ಟ್ರೀಯ ಪಕ್ಷವೊಂದು ಜೆಡಿಎಸ್ ಕೈ ಹಿಡಿದಿರುವುದು ಹಾಸ್ಯಾಸ್ಪದ. ತಾವು ಅಸ್ತಿತ್ವ ಕಳೆದು ಕೊಂಡರೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿತ್ತು. ಆದರೆ ಇದು ಎಷ್ಟು ದಿನ ಎಂಬುದನ್ನು ಈ ಎರಡೂ ಪಕ್ಷಗಳ ಮುಖಂಡರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂಜಾರಿ ಸುಭದ್ರ ಸರಕಾರ ನೀಡುವುದಾಗಿ ಭರವಸೆ ನೀಡಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಜನರಲ್ಲಿ ವಿಶ್ವಾಸ ತುಂಬುವ ಯಾವ ಕೆಲಸವನ್ನೂ ಮಾಡಿಲ್ಲ. ಬದಲಿಗೆ ನೂರು ದಿನಗಳಲ್ಲಿ ನೂರು ಸಮಸ್ಯೆಗಳನ್ನು ತಂದೊಡ್ಡಿವೆ. ರೈತರ ಸಾಲ ಮನ್ನಾ ಮಾಡಿದ್ದೇವೆ ಎನ್ನುತ್ತಿದೆಯೇ ವಿನಹ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ, ಮೀನುಗಾರರು, ಮಹಿಳಾ ಸ್ವ ಸಹಾಯ ಸಂಘಗಳ ಸಾಲ ಮನ್ನಾದ ಬಗ್ಗೆ ಮಾತನಾಡುತ್ತಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಪಾದಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವು- ಮುಂಗುಸಿಗಳಂತೆ ದುರುಗುಟ್ಟು ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ರೈತರು, ಬಡ ಮತ್ತು ಹಿಂದುಳಿದ ವರ್ಗಕ್ಕೆ ಏನೂ ಮಾಡದ ಸರಕಾರ ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಸಚಿವರು ಎಸ್ಕಾರ್ಟ್‌ನಲ್ಲಿ ಪ್ರೇಕ್ಷಣೀಯ ಸ್ಥಳ ನೋಡುವಂತೆ ಬಂದು ಹೋಗುತ್ತಿದ್ದಾರೆ. 10 ದಿನಗಳಲ್ಲಿ ಸಿದ್ಧ ಮನೆ ಕಟ್ಟಿ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿದರೂ ಈವರೆಗೆ ಏನೂ ಮಾಡಿಲ್ಲ. ಜನರಿಗೆ ರಸ್ತೆ, ಆಹಾರ, ಉದ್ಯೋಗ ಒದಗಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ನೂರು ದಿನದ ಸಂಭ್ರಮ ಬಿಟ್ಟು, ಜನಪರವಾಗಿ ಕೆಲಸ ಮಾಡಬೇಕು ಎಂದು ಕೋಟ ಸಲಹೆ ನೀಡಿದರು.
ಶಿರಾಡಿ, ಸಂಪಾಜೆ, ಚಾರ್ಮಾಡಿ ಘಾಟಿ ರಸ್ತೆಗಳು ಹದಗೆಟ್ಟು ಕರಾವಳಿ ಜಿಲ್ಲೆಗಳ ಸಂಪರ್ಕ ಬಹತೇಕ ಕಡಿದು ಹೋಗಿದೆ. ಎಲ್ಲ ಇಲಾಖೆ ಅಧಿಕಾರಿ, ಇಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆಸಿ ಸಮರೋಪಾದಿಯಲ್ಲಿ ಘಾಟಿ ರಸ್ತೆ ದುರಸ್ತಿಪಡಿಸಿ, ಸಂಚಾರ ಪುನಾರಂಭ ಮಾಡುವ ಜವಾಬ್ದಾರಿ ಸರಕಾರದ್ದಾಗಿದೆ. ಸುಳ್ಯದ ಅರಂತೋಡು ಹಾಗೂ ಆಸುಪಾಸಿನ ಗ್ರಾಮಗಳು ಕೂಡಾ ಮುಳುಗಡೆಯಾಗಿದ್ದು, ಅಲ್ಲಿಗೆ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ವೇದವ್ಯಾಸ ಡಿ. ಕಾಮತ್, ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರು, ಸಂಜಯ ಪ್ರಭು, ಜಿತೇಂದ್ರ ಕೊಟ್ಟಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಜೋಯ್ಲಸ್ ಡಿಸೋಜ, ವಸಂತ ಪೂಜಾರಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English