ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳು ಹಾಗೂ ಬಂಟ್ವಾಳ ಪುರಸಭೆಯ 89 ವಾರ್ಡ್ ಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
ಬೆಳಿಗ್ಗೆ 7 ಗಂಟೆಯಿಂದ ಎಲ್ಲ ವಾರ್ಡ್ ಗಳಲ್ಲಿ ಏಕಕಾಲಕ್ಕೆ ಮತದಾನ ಆರಂಭವಾಯಿತು. ಬೆಳಿಗ್ಗೆ 9 ಗಂಟೆ ವೇಳೆಗೆ ಉಳ್ಳಾಲದಲ್ಲಿ ಶೇಕಡ 13ರಷ್ಟು, ಪುತ್ತೂರಿನಲ್ಲಿ ಶೇ 14ರಷ್ಟು ಮತ್ತು ಬಂಟ್ವಾಳದಲ್ಲಿ ಶೇ 15ರಷ್ಟು ಮತದಾನ ನಡೆದಿದೆ.
ಬೆಳಿಗ್ಗೆ 11 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 30.78ರಷ್ಟು ಮತದಾನವಾಗಿದೆ. ಉಳ್ಳಾಲ ನಗರಸಭೆಯಲ್ಲಿ ಶೇ 28.70ರಷ್ಟು, ಪುತ್ತೂರು ನಗರಸಭೆಯಲ್ಲಿ ಶೇ 30.89 ಮತ್ತು ಬಂಟ್ವಾಳ ಪುರಸಭೆಯಲ್ಲಿ ಶೇ 33.25ರಷ್ಟು ಮತ ಚಲಾವಣೆಯಾಗಿದೆ.
ಪುತ್ತೂರು ನಗರಸಭೆಯ 19ನೇ ವಾರ್ಡ್ ನ ಪರ್ಲಡ್ಕ ಮತಗಟ್ಟೆಯಲ್ಲಿ ಪ್ರಾಯೋಗಿಕ ಮತದಾನದ ವೇಳೆ ಚಲಾಯಿಸಿದ 10 ಮತಗಳಲ್ಲಿ 6 ಮತಗಳು ನೋಟಾಕ್ಕೆ ಪರಿವರ್ತನೆಯಾಗಿತ್ತು. ಇದರಿಂದಾಗಿ ಗೊಂದಲ ಉಂಟಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಪುಷ್ಪಲತಾ ಪರ ಮತಗಟ್ಟೆ ಏಜೆಂಟ್ ತಕರಾರು ಸಲ್ಲಿಸಿದರು. ಮೂರು ಬಾರಿ ಪ್ರಾಯೋಗಿಕ ಮತದಾನ ನಡೆಸಲಾಯಿತು. ಮೂರನೇ ಬಾರಿ ಸರಿಯಾಗಿ ಮತಗಳು ದಾಖಲಾದವು. ಬಳಿಕ ಅದೇ ಮತಯಂತ್ರ ಬಳಸಿ ಮತದಾನ ಮುಂದುವರಿಸಲಾಯಿತು. ಇದರಿಂದಾಗಿ ಕೆಲಕಾಲ ಮತದಾನ ವಿಳಂಬವಾಗಿತ್ತು.
ಉಡುಪಿ: ಸ್ಥಳೀಯ ಸಂಸ್ಥೆಗಳಿಗೆ ಮತದಾನ ಬಿರುಸಿನಿಂದ ಸಾಗಿದೆ. ಬೆಳಿಗ್ಗೆ 11ರ ಹೊತ್ತಿಗೆ ಉಡುಪಿ ನಗರಸಭೆಗೆ ಶೇ30.4, ಸಾಲಿಗ್ರಾಮ ಪಟ್ಟಣ ಪಂಚಾಯ್ತಿಗೆ 37.64, ಕುಂದಾಪುರ ಪುರಸಭೆಗೆ 29.37, ಕಾರ್ಕಳ ಪುರಸಭೆಗೆ 34.29 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 31.4 ಪ್ರಮಾಣದ ಮತದಾನ ನೆಡೆದಿದೆ.
ಕಾರವಾರ: ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಯ ಮತದಾನದಲ್ಲಿ 11 ಗಂಟೆಯವರೆಗೆ ಶೇ 25.57ರಷ್ಟು ಮತದಾನವಾಗಿದೆ.
ಕಾರವಾರದಲ್ಲಿ ಶೇ 17.24, ಶಿರಸಿಯಲ್ಲಿ 21.84, ದಾಂಡೇಲಿಯಲ್ಲಿ 22.19, ಅಂಕೋಲಾದಲ್ಲಿ 27.36, ಕುಮಟಾದಲ್ಲಿ 28.05, ಹಳಿಯಾಳದಲ್ಲಿ 28.54, ಯಲ್ಲಾಪುರದಲ್ಲಿ 27.53, ಮುಂಡಗೋಡದಲ್ಲಿ 31.77ರಷ್ಟು ಮತದಾನವಾಗಿದೆ.
Click this button or press Ctrl+G to toggle between Kannada and English