ಮೂಡಬಿದಿರಿ: “ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಕಾವ್ಯವು ಮಾಡುತ್ತದೆ. ಇದಕ್ಕೆ ಪೂರಕವಾಗಿ ಮೂಡಿ ಬಂದಿರುವ ಕಾವ್ಯವೇ ಕೇಶವ್ ಭಟ್ರು ರಚಿಸಿದ “ಮಂದಾರ ರಾಮಾಯಣ”. ಈ ಕಾವ್ಯ ವನ್ನು ವಿಮರ್ಶಾತ್ಮಕ ಚಿಂತನೆಗೆ ಒಳಪಡಿಸದೆ, ಇದರ ನಿಜವಾದ ತಿರುಳಾದ ಧರ್ಮಾರ್ಥಕಾಮ ಮೋಕ್ಷಗಳನ್ನು ಅರಿಯಬೇಕೆಂದು ಮೂಡಬಿದಿರೆ ಜೈನ ಮಠದ ಸ್ವಾಮೀಜಿ ಚಾರುಕೀರ್ತಿ ಪಂಡಿತಾಚಾರ್ಯವರ್ಯರು ತಿಳಿಸಿದರು.
ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರವು ಆಯೋಜಿಸಿದ ‘ಮಂದಾರ ಮಂಥನ’ ತುಳು ಮಂದಾರ ರಾಮಾಯಣ ಕಾವ್ಯಾವಲೋಕನ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಭಾಷೆಯು ಪಂಚ ದ್ರಾವಿಡ ಭಾಷೆಗಳಲ್ಲಿ ಪ್ರಗತಿ ಹೊಂದಿದ ಭಾಷೆಯಾಗಿದ್ದು, ವಿಜಯನಗರ ಅರಸರ ಕಾಲದಲ್ಲೂ ಈ ಭಾಷೆ ಬಳಕೆಯಲ್ಲಿತ್ತು. ಸತ್ಯವಂತರು ಮತ್ತು ವಿದ್ಯಾವಂತರ ಜಿಲ್ಲೆಯಾಗಿರುವ ದಕ್ಷಿಣ ಕನ್ನಡವು ವೈವಿಧ್ಯಮಯ ಸಂಸ್ಕೃತಿ, ಪಕೃತಿ ಸೌಂದರ್ಯ, ಸ್ವಾಭಿಮಾನ ಜೀವನ ಶೈಲಿಯನ್ನು ಹೊಂದಿದೆ. ಮಂದಾರ ರಾಮಾಯಣದಲ್ಲಿ ತುಳುನಾಡಿನ ವೈಭವ, ರಾಮನ ಆದರ್ಶಗಳನ್ನು ಉಲ್ಲೇಖಿಸಲಾಗಿದೆ. ಕಾವ್ಯಗಳನ್ನು ಓದುವುದರಿಂದ ದೈವೀ ಶಕ್ತಿ ಮತ್ತು ಅಸುರ ಶಕ್ತಿಗಳ ನಡುವಿನ ವ್ಯತ್ಯಾಸವನ್ನು ತಿಳಿಯಬಹುದು ಹಾಗೂ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಕಾವ್ಯವು ಅಗಾಧ ಪಾತ್ರವಹಿಸುತ್ತದೆ. ಕೆಲವೊಂದು ಕಾವ್ಯಗಳು ಓದುಗರಿಗೆ ರಸದೌತಣ ನೀಡಿದರೆ ಇನ್ನೂ ಕೆಲವೊಂದು ನಮ್ಮಲಿರುವ ದ್ವಂದ್ವಗಳನ್ನು ಹೊರಹಾಕಿ ಸಾತ್ವಿಕತೆಯನ್ನು ಹುಟ್ಟುಹಾಕುತ್ತದೆ ಎಂದು ನುಡಿದರು.
Click this button or press Ctrl+G to toggle between Kannada and English