ಮಂಗಳೂರು: ರಾಜ್ಯದ ಅತಿವೃಷ್ಟಿ ಪೀಡಿತ ಪ್ರದೇಶಗಳ ಹಾನಿಯ ಪರಿಶೀಲಿಸಿ ವರದಿ ನೀಡಲು ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳ ತಂಡ ಗುರುವಾರ ದಕ್ಷಿಣ ಜಿಲ್ಲೆಯ ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನಲ್ಲಿ ಅತಿವೃಷ್ಠಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ತಂಡ ಭೇಟಿ ನೀಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ತಂಡಕ್ಕೆ ಮಾಹಿತಿ ನೀಡಿದರು.
ಮೊದಲಿಗೆ ತಂಡವು ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಬಂಟ್ವಾಳದ ತುಂಬೆ ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹಿಸಿದರು. ಅತಿವೃಷ್ಟಿ ಡ್ಯಾಂ ರೀಟೈನಿಂಗ್ ವಾಲ್ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು.
ಆನಂತರ, ಕಳೆದ ಜೂನ್ ನಲ್ಲಿ ಭಾರೀ ಮಳೆಗೆ ಕುಸಿದು ಬಿದ್ದಿರುವ ಮೂಲರಪಟ್ಣ ಸೇತುವೆ ಸ್ಥಳಕ್ಕೆ ಭೇಟಿ ನೀಡಿದೆ. ಮಂಗಳೂರಿನ ಕುಪ್ಪೆಪದವಿನಿಂದ ಬಂಟ್ವಾಳ ಸಂಪರ್ಕಿಸುವ ಮೂಲರಪಟ್ಣ ಸೇತುವೆ ಇದಾಗಿದೆ
ಅಷ್ಟೇ ಅಲ್ಲ, ವಿಟ್ಲ ಪಡ್ನೂರ್ ಗ್ರಾಮಕ್ಕೆ ಭೇಟಿ ನೀಡಿ ಅಡಕೆ ಕೊಳೆ ರೋಗದಿಂದ ನಷ್ಟ ಸಂಭವಿಸಿದ ಮಾಹಿತಿ ಸಂಗ್ರಹಿಸಲಾಗಿದೆ. ಆನಂತರ ಕಾಣಿಯೂರಿಗೆ ಭೇಟಿ ನೀಡಿ ಅಡಕೆ ತೋಟ ಹಾನಿ ಆಗಿರುವುದರ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಇಂದಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಾಜೆ ಶಾಲೆ ಸಂಪರ್ಕ ರಸ್ತೆಯ ರಸ್ತೆ ಬದಿ ಮಣ್ಣು ಕುಸಿತ ಉಂಟಾದ ಪ್ರದೇಶದಲ್ಲಿ ನಷ್ಟದ ಮಾಹಿತಿಯನ್ನೂ ಅಧಿಕಾರಿಗಳ ತಂಡ ಪಡೆದುಕೊಂಡಿದೆ. ನಂತರ ಕಲ್ಲಾಜೆ ರಸ್ತೆ ಹಾನಿ ಆಗಿರುವ ಸ್ಥಳ ಪರಿಶೀಲಿಸಿದ ತಂಡ ಅನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದೆ.
ತದನಂತರ, ಶಿರಾಡಿ ಘಾಟಿ ಪ್ರದೇಶದಲ್ಲಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿರುವ ಭೂಕುಸಿತದ ಸಮೀಕ್ಷೆಯನ್ನು ಕೂಡ ತಂಡದ ಅಧಿಕಾರಿಗಳು ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಉಪಕಾರ್ಯದರ್ಶಿ ಭರತೇಂದ್ರ ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್ ಮತ್ತು ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English