ಬೆಂಗಳೂರು: ಬಿಜೆಪಿಯವರು ಸರ್ಕಾರ ಬೀಳಿಸುವ ಕೆಲಸ ಮಾಡುತ್ತಿದ್ದು, ಹಣದ ಆಮಿಷ ಮಾಡುತ್ತಿರುವುದು ಗೊತ್ತಿದೆ. ಹಣ ಎಲ್ಲಿ ಸಂಗ್ರಹ ಆಗುತ್ತಿದೆ. ಇದರ ಕಿಂಗ್ ಪಿನ್ ಯಾರು ಎಲ್ಲವೂ ಗೊತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಕಡತಕ್ಕೆ ಬೆಂಕಿ ಇಟ್ಟವರೂ ಈಗ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಎಲ್ಲವೂ ಗೊತ್ತು, ನಾನೇನು ಸುಮ್ಮನೆ ಕುಳಿತಿಲ್ಲ ಎಂದು ಹೇಳಿದರು. ಹಣ ಹಂಚಿಕೆ ಕುರಿತು ಕಾನೂನು ಕ್ರಮ ತೆಗೆದುಕೊಳ್ಳುವ ಸಿದ್ಧತೆ ಮಾಡಿದ್ದೇನೆ. ಸಕಲೇಶಪುರದ ಕಾಫಿ ಪ್ಲಾಂಟರ್ ರೆಸಾರ್ಟ್ ಮಾಡಲು ಹೋಗಿದ್ದರು. ಜನ್ಮ ಕೊಟ್ಟ ಮಗುವಿಗೆ ಗುಂಡಿಟ್ಟು ಕೊಂದವರು ಅವರು. ಈಗ ಜೈಲಲ್ಲಿ ಇದ್ದಾರೆ. ಅದಕ್ಕೆ ಕಾರಣರಾದವರು ಯಾರು ಎಂದು ಗೊತ್ತು. ಆ ವ್ಯಕ್ತಿಯೇ ಈಗ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರಿಗಳಿಗೆ ಚಾಟಿ :
ರಾಜ್ಯ ಮೈತ್ರಿ ಸರ್ಕಾರದ ಉಳಿವಿನ ವಿರುದ್ಧ ಶಂಕೆ ವ್ಯಕ್ತಪಡಿಸಿ ತಮ್ಮ ಕರ್ತವ್ಯ ಮಾಡಲು ಅಸಡ್ಡೆ ತೋರಿಸುತ್ತಿರುವ ಕೆಲ ಇಲಾಖೆಗಳ ಅಧಿಕಾರಿಗಳಿಗೆ ಚಾಟಿ ಬೀಸಿ ತಮ್ಮಷ್ಟು ಕಠಿಣವಾಗುತ್ತೇನೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಾನು ನಿರಂತರವಾಗಿ ಎಲ್ಲಾ ಸಚಿವರೊಂದಿಗೆ ಸಂಪರ್ಕದಲ್ಲಿದ್ದು, ಯೋಜನೆಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲು ಇಚ್ಛಿಸಿದ್ದೇನೆ. ಇಂದು ಮಹದಾಯಿ ತೀರ್ಪಿನ ಸಾಧಕ ಭಾದಕಗಳ ಬಗ್ಗೆ ನೀರಾವರಿ ಸಚಿವ ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ ಮಾತನಾಡಲಿದ್ದೇನೆ. ಸರ್ಕಾರ ಜವಾಬ್ದಾರಿಯುತವಾಗಿ ನಡೆಯಲು ಸೋಮವಾರದಿಂದ ಇಲಾಖೆಗಳ ಪ್ರತ್ಯೇಕ ಸಭೆ ನಡೆಸುತ್ತೇನೆ ಎಂದು ಮಾಹಿತಿ ನೀಡಿದರು.
ಬಿಎಸ್ವೈಗೆ ಟಾಂಗ್ :
ಇದೇ ವೇಳೆ ಬಿಎಸ್‍ವೈ ಅವರಿಗೆ ಟಾಂಗ್ ನೀಡಿದ ಕುಮಾರಸ್ವಾಮಿ, ರಾಜ್ಯ ಪ್ರತಿಪಕ್ಷದ ನಾಯಕರಿಗೆ ಇಂತಹ ಕಾರ್ಯಗಳು ಬೇಕಿಲ್ಲ. ಅವರು ತಮ್ಮದೇ ಕಾರ್ಯದಲ್ಲಿದ್ದಾರೆ. ಸಚಿವರಲ್ಲಿ ಯಾವುದೇ ಬಂಡಾಯವಿಲ್ಲ. ಜಾರಕಿಹೊಳಿ ಅವರು ಕೂಡ ನನ್ನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಾನು ಸುಮ್ಮನೆ ಕುಳಿತಿಲ್ಲ. ಗೌರಿ ಗಣೇಶ ಹಬ್ಬದ ವೇಳೆಗೆ ಡೆಡ್ ಲೈನ್ ನೀಡಿದ್ದರು. ಈಗ ಸೋಮವಾರಕ್ಕೆ ನೀಡಲಾಗಿದೆ. ಶಾಸಕರಿಗೆ ಹಣದ ಅಮಿಷ ನೀಡಲಾಗುತ್ತಿದೆ. ಎಲ್ಲವೂ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ. ಸದ್ಯ ಶನಿವಾರ ಬೆಳಗಾವಿಗೆ ತೆರಳಿ ರಾಷ್ಟ್ರಪತಿಗಳ ಕಾರ್ಯಕ್ರಮದ ಬಳಿಕ ಅಲ್ಲಿನ ಜನರ ಸಮಸ್ಯೆ ಕೇಳಲು ಜನತಾ ದರ್ಶನ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದೊಂದಿಗೆ ಸ್ನೇಹಿತರಾಗಿದ್ದ ಕೆಲ ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ಮೈಸೂರು ಭಾಗದ ಶಾಸಕರನ್ನು ಇಲ್ಲಿ ಹೆಸರಿಸಲ್ಲ. ಏಕೆಂದರೆ ನನ್ನ ಬಳಿ ಇರುವ ಪಟ್ಟಿಯೇ ಬೇರೆ. ಮೈಸೂರು ಭಾಗದ ಬಿಜೆಪಿಯವರು ಎಂಬ ನಿಮ್ಮ ಊಹೆ ತಪ್ಪು ಎಂದರು.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ನವರು ತೀರ್ಮಾನಿಸಿದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ. ಬಿಜೆಪಿಯವರು ರೆಸಾರ್ಟ್ ಆದರೂ ಮಾಡಲಿ ಗುಡಿಸಲಾದರೂ ಮಾಡಲಿ. ಸದ್ಯ ಬಿಜೆಪಿಯವರು ಅಡ್ವಾನ್ಸ್ ಪೇಮೆಂಟ್ ಮಾಡುತ್ತಿದ್ದಾರೆ. ನಾನಾಗಿಯೇ ಬಿಜೆಪಿ ಶಾಸಕರನ್ನು ಸೆಳೆಯಲ್ಲ. ನಾನು ಮೈಸೂರು ಭಾಗದ ಬಿಜೆಪಿ ಶಾಸಕರನ್ನ ಟಚ್ ಮಾಡಲ್ಲ. ಬಿಜೆಪಿಯ ಕೆಲ ಶಾಸಕರ ಜೊತೆ ನನ್ನ ಹಳೆ ಸಂಬಂಧಗಳಿವೆ. ಸರ್ಕಾರ ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಅಭಿವೃದ್ಧಿ ಮುಖ್ಯ. ಆ ಬಗ್ಗೆ ನಾನು ಹೆಚ್ಚಿನ ಗಮನ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.
Click this button or press Ctrl+G to toggle between Kannada and English