ಹೊಳ್ಳರ ಸಾಧನೆಗೆ ಒಲಿದು ಬಂದ ಸಂಗೀತ ವಿಶಾರದೆ ಬಿರುದು

3:01 PM, Monday, September 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

ujireಉಜಿರೆ: ಉಡುಪಿಯ ಅಷ್ಠ ಮಠಗಳಲ್ಲೊಂದಾದ ಶ್ರೀ ಕಾಣಿಯೂರು ಮಠದ ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಪುತ್ತೂರಿನ ಹೆಸರಾಂತ ಸಂಗೀತ ಕಲಾವಿದೆ ವಿದುಷಿ ಸುಚಿತ್ರಾ ಹೊಳ್ಳ ಇವರಿಗೆ ’ಸಂಗೀತ ವಿಶಾರದೆ’ ಬಿರುದನ್ನಿತ್ತು ಪುರಸ್ಕರಿಸಿದರು.

ದಿನಾಂಕ : 15-09-18ರ ಶನಿವಾರದಂದು ಉದಯಗಿರಿ ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ಚಾತುರ್ಮಾಸ್ಯ ಮಹೋತ್ಸವದ ಅಂಗವಾಗಿ ವಿದುಷಿ ಶ್ರೀಮತಿ ಸುಚಿತ್ರಾ ಹೊಳ್ಳರವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಬಳಿಕ ಶ್ರೀಪಾದಂಗಳವರು ಕಲಾವಿದೆಯ ಸಾಧನೆಯನ್ನು ಗಮನಿಸಿ ಗಣ್ಯರು ಹಾಗೂ ಸಭಾಸದರ ಸಮ್ಮುಖದಲ್ಲಿ ಸಂಗೀತ ವಿಶಾರದೆ ಎಂಬ ಬಿರುದನ್ನು ನೀಡಿ ಗೌರವಿಸಿದರು. ujire-2

ವಿದುಷಿ ಶ್ರೀಮತಿ ಸುಚಿತ್ರಾ ಹೊಳ್ಳ ಇವರು ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ 1991ರಲ್ಲಿ ರಾಗತರಂಗ ಸಂಸ್ಥೆ ಮಂಗಳೂರು ಇವರಿಗೆ ಬಾಲಪ್ರತಿಭಾ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ. ಸುಚಿತ್ರ ಅವರ ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸ್ಕಾಲರ್‌ಶಿಪ್ ಕೂಡಾ ದೊರೆತಿದೆ.

ಈ ಎಲ್ಲಾ ಸಾಧನೆಗೆ ಕಲಶಪ್ರಾಯವೆಂಬಂತೆ ಉಡುಪಿಯ ರಾಗಧನ ಸಂಸ್ಥೆಯವರು ಕೊಡಮಾಡುವ 2017ರ ರಾಗ ಧನ ಪಲ್ಲವಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏರುಕಂಠ, ಚುರುಕು ನಡೆಯ ಪ್ರಸ್ತುತಿ ಇವರ ಹಾಡುಗಾರಿಕೆಯ ವಿಶೇಷತೆ. ಅಲ್ಲದೆ ಸಾಧನಾ ಸಂಗೀತ ವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಪುತ್ತೂರು ಹಾಗೂ ಬಿ.ಸಿ. ರೋಡ್‌ನ ಸುತ್ತಮುತ್ತಲಿನ ಅನೇಕ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ತನ್ನ ಸಂಗೀತ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ ಪ್ರತಿ ತಿಂಗಳು ನಟರಾಜ ವೇದಿಕೆಯಲ್ಲಿ ಸ್ವರಮಾಲಾ ಸಂಗೀತ ಸೇವಾ ಸರಣಿ ಕಾರ್ಯಕ್ರಮ ನಡೆಸುತ್ತಾರೆ. ಇದು ಈಗಾಗಲೇ ೪೮ ಸರಣಿಯನ್ನು ಮುಗಿಸಿರುತ್ತದೆ. ಈ ಎಲ್ಲಾ ಸಾಧಬೆಗಳ ಜೊತೆಗೆ ಈಗ ಸಂಗೀತ ವಿಶಾರದೆ ಬಿರುದು ಮುಡಿಗೇರಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ‍್ಯಕ್ರಮ ಜರುಗಿತು.

ಇವರಿಗೆ ಪಕ್ಕವಾದ್ಯದಲ್ಲಿ ವಯೋಲಿನ್ ವಾದನದಲ್ಲಿ ವಿದ್ವಾನ್ ಗಣರಾಜ್ ಕಾರ್ಲೆ, ಮೃದಂಗ ವಾದನದಲ್ಲಿ ವಿದ್ವಾನ್ ಡಾ.ವಿ.ಆರ್.ನಾರಾಯಣಪ್ರಕಾಶ್ ಕ್ಯಾಲಿಕಟ್ ಮತ್ತು ಘಟಂ ವಾದನದಲ್ಲಿ ವಿದ್ವಾನ್ ರಾಜೇಶ್ ಆಲುವ ಸಹಕರಿಸಿದರು.

ಇವರು ಉಜಿರೆಯ ಜನಾರ್ದನ ಶಾಲೆ, ಎಸ್.ಡಿ.ಎಮ್. ಹೈಸ್ಕೂಲ್ ಹಾಗೂ ಎಸ್.ಡಿ.ಎಮ್. ಕಾಲೇಜಿನ ಹಳೆ ವಿದ್ಯಾಥಿನಿ. ಉಜಿರೆಯ ವೇದಮೂರ್ತಿ ಶ್ರೀನಿವಾಸ ಹೊಳ್ಳ ಹಾಗೂ ಶ್ರೀಮತಿ ಮೂಕಾಂಬಿಕಾ ದಂಪತಿಗಳ ಪುತ್ರಿ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English