ಮಂಗಳೂರು: ಸದಾ ಸಕ್ರೀಯ ರಾಜಕೀಯ ಚಟುವಟಿಕೆ, ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಮಾಜಿ ಸಚಿವ ರಮಾನಾಥ್ ರೈ ಈ ಬಾರಿ ಕಾರ್ಯಕ್ರಮವೊಂದರಲ್ಲಿ ಸುಶ್ರಾವ್ಯವಾಗಿ ಹಳೆ ಹಿಂದಿ ಚಿತ್ರಗೀತೆಯೊಂದನ್ನು ಹಾಡಿ ಜನರನ್ನು ರಂಜಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ರಮಾನಾಥ್ ರೈ ರಾಜಕಾರಣದಿಂದ ಬಿಡುವು ಪಡೆದುಕೊಳ್ಳುವುದು ಬಲು ಅಪರೂಪ ಅಂತಾನೇ ಹೇಳಬಹುದು. ವಿದ್ಯಾರ್ಥಿ ಜೀವನದ ದಿನಗಳಲ್ಲಿ ರೈ ಖ್ಯಾತ ಕ್ರೀಡಾಪಟು ಆಗಿದ್ದರು. ಅದಲ್ಲದೇ ಸಂಗೀತ ಪ್ರೇಮಿ ಕೂಡ. ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಸುಶ್ರಾವ್ಯವಾಗಿ ಹಾಡುತ್ತಿದ್ದರು.
ಬಂಟ್ವಾಳದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ರಮಾನಾಥ್ ರೈ ತಮ್ಮ ವಿದ್ಯಾರ್ಥಿ ಜೀವನದ ಮೆಲುಕು ಹಾಕಿದರು. ಮಾತ್ರವಲ್ಲದೇ ತಮ್ಮ ಅಚ್ಚುಮೆಚ್ಚಿನ ಹಳೆ ಹಿಂದಿ ಚಿತ್ರದ ಹಾಡೊಂದನ್ನು ಹಾಡಿ ನೆರೆದವರನ್ನು ರಂಜಿಸಿದರು. ಇದೀಗ ರೈ ಅವರ ಹಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶ್ಲಾಘನೆ ವ್ಯಕ್ತವಾಗಿದೆ.
ಬರ್‌ಸಾತ್ ಚಿತ್ರದ ಜಿಂದಗಿ ‘ಬರ್ ನಹೀ ಬೂಲೆಗೀ ಓ ಬರ್‌ಸಾತ್ ಕೀ ರಾತ್. ಏಕ್ ಹಸೀನಾಸೆ ಮುಲಾಕಾತ್ ಕೀ ರಾತ್…ಹಾಡನ್ನು ರೈ ಸುಶ್ರಾವ್ಯವಾಗಿ ಹಾಡಿದ್ದಾರೆ. ಅದಲ್ಲದೇ ತುಳುವಿನಲ್ಲಿ ಮೋಕೆದ ಸಿಂಗಾರಿ. ಉಂತುದೆ ವೈಯ್ಯಾರಿ ಹಾಡನ್ನು ಕಲಾವಿದನ ಜತೆ ಹಾಡುವ ಮೂಲಕ ಜನರ ಹುಬ್ಬೇರಿಸುವಂತೆ ಮಾಡಿ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡಿದ್ದಾರೆ.
ಕಳೆದ ಬಾರಿಯೂ ಜಕ್ರಿಬೆಟ್ಟುವಿನಲ್ಲಿ ನಡೆದಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹಾಡಿ ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದ್ದ ರಮಾನಾಥ್ ರೈ ಈ ಬಾರಿಯೂ ಪಾಲ್ಗೊಂಡಿದ್ದರು . ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಬಳಿಕ ಸಾಕಷ್ಟು ಡಲ್ ಆಗಿದ್ದ ರಮಾನಾಥ ರೈ ಇದೀಗ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ.
ಇದಕ್ಕಾಗಿ ಪ್ರತೀ ಕಾರ್ಯಕ್ರಮಗಳಿಗೆ ತೆರಳಿ ಜನರೊಂದಿಗೆ ಬೆರೆಯುತ್ತಿರುವ ರೈ, ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಹೊಸ ಇನ್ನಿಂಗ್ಸ್ ಆರಂಭಿಸುವ ಇರಾದೆ ಹೊಂದಿದ್ದಾರೆ
Click this button or press Ctrl+G to toggle between Kannada and English