ಮಂಗಳೂರು: ನಗರದ ಕುಲಶೇಖರ ನಿಡ್ಡೇಲ್ ಮೈದಾ ಫಾಕ್ಟರಿಯ ಬಳಿ ಸಂಜೆ ವೇಳೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗನ್ನು ಸುಲಿಗೆ ಮಾಡಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ವಾಮಂಜೂರು ಮಸೀದಿ ಕಂಪೌಂಡ್ ನಿವಾಸಿ ಆರೀಫ್ (24) ಬಂಧಿತ ಆರೋಪಿ. ಬಂಧಿತನಿಂದ ನಂಬರ್ ಇಲ್ಲದ ಹೋಂಡಾ ಆಕ್ಟಿವಾ, ಕೃತ್ಯ ನಡೆಸಲು ಉಪಯೋಗಿಸಿದ ಎರಡು ಹೆಲ್ಮೆಟ್, ಸುಲಿಗೆ ಮಾಡಿದ ಬ್ಯಾಗ್ಗಳಲ್ಲಿದ್ದ ಎಂಟು ವಿವಿಧ ಕಂಪನಿಗಳ ಮೊಬೈಲ್ ಫೋನ್ ಹಾಗೂ ಎಟಿಎಂ ಕಳವು ಯತ್ನಕ್ಕೆ ಉಪಯೋಗಿಸಿದ ರಾಡ್ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಆರೋಪಿ ಆರೀಫ್ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕೊಲೆ ಯತ್ನ ಹಾಗೂ ದರೋಡೆ ಯತ್ನದಂತಹ 3 ಪ್ರಕರಣಗಳು ದಾಖಲಾಗಿವೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು, ಒಟ್ಟಾಗಿ ಮಂಗಳೂರು ನಗರ ಪೊಲೀಸ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 6 ಮಹಿಳೆಯರ ಬ್ಯಾಗ್ ಸುಲಿಗೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಆರೋಪಿ ಆರೀಫ್ ಮಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಎಟಿಎಂ ಕಳವು ಯತ್ನ ಪ್ರಕರಣದಲ್ಲಿ ಕೂಡ ಭಾಗಿಯಾಗಿರುತ್ತಾನೆ. ಈತ ಈಗಾಗಲೇ ದಸ್ತಗಿರಿಯಾದ ಅಜರುದ್ದೀನ್ ಎಂಬಾತನೊಂದಿಗೆ ಲಾರಿ ಬ್ಯಾಟರಿ ಕಳವು ಹಾಗೂ ಕಾಂಕ್ರೀಟ್ ಕಬ್ಬಿಣದ ಶೀಟ್ ಕಳವು ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English